ADVERTISEMENT

ಸುದ್ದಿ ಪ್ರಕಟಿಸದಂತೆ ಕೋರಿಕೆ

ಸಿಜೆಐ ವಿರುದ್ಧದ ಆರೋಪ ಪ್ರಕರಣ; ಎನ್‌ಜಿಒದಿಂದ ಹೈಕೋರ್ಟ್‌ಗೆ ಅರ್ಜಿ

ಏಜೆನ್ಸೀಸ್
Published 27 ಏಪ್ರಿಲ್ 2019, 20:15 IST
Last Updated 27 ಏಪ್ರಿಲ್ 2019, 20:15 IST
ರಂಜನ್ ಗೊಗೊಯಿ
ರಂಜನ್ ಗೊಗೊಯಿ   

ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಇತ್ಯರ್ಥ ಆಗುವವರೆಗೆ, ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಿಸದಂತೆ ತಡೆ ವಿಧಿಸಬೇಕು ಎಂದು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ.

ಎನ್‌ಜಿಒ ‘ಆ್ಯಂಟಿ ಕರಪ್ಷನ್ ಕೌನ್ಸಿಲ್ ಆಫ್ ಇಂಡಿಯಾ’ ಸಲ್ಲಿಸಿರುವಈ ಅರ್ಜಿ,ಏಪ್ರಿಲ್ 29ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.

‘ದೇಶ ವಿರೋಧಿ ಶಕ್ತಿಗಳು’ ಈ ಪ್ರಕರಣದಲ್ಲಿ ಕೈವಾಡ ಹೊಂದಿರುವ ಶಂಕೆ ಇದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ADVERTISEMENT

‘ಸಿಜೆಐ ವಿರುದ್ಧದ ಆರೋಪ ಗಳಪ್ರಕಟಣೆಗೆ ನಿರ್ಬಂಧ ವಿಧಿಸದಿದ್ದರೆ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನೇರ ಪರಿಣಾಮ ಉಂಟಾಗಲಿದೆ. ಜನರು ನ್ಯಾಯಾಂಗದ ಮೇಲೆ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇದೆ’ ಎಂದು ಅರ್ಜಿದಾರರು ಹೇಳಿದ್ದಾರೆ.

‘ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸುದ್ದಿ ಪ್ರಸಾರಕ್ಕೆ ನಿರ್ಬಂಧ ಹೇರಬೇಕು.ವಾಟ್ಸ್‌ಆ್ಯಪ್, ಗೂಗಲ್, ಯೂಟ್ಯೂಬ್, ಲಿಂಕ್ಡ್‌ಇನ್ ಕಾರ್ಪೊರೇಷನ್ ಹಾಗೂ ಸ್ಕ್ರಾಲ್.ಇನ್ ವೆಬ್‌ಸೈಟ್‌ಗೆ ನಿರ್ದೇಶನ ನೀಡಬೇಕು’ ಎಂದುಮನವಿ ಮಾಡಲಾಗಿದೆ.

ಕಾನೂನು ಹಾಗೂ ನ್ಯಾಯಾಂಗ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ದೆಹಲಿ ಸರ್ಕಾರ, ಭಾರತೀಯ ಮಾಧ್ಯಮ ಮಂಡಳಿ ಹಾಗೂ ದೆಹಲಿ ಪೊಲೀಸ್ ಆಯುಕ್ತರನ್ನು ಅರ್ಜಿಯಲ್ಲಿ ಪ್ರತಿವಾದಿಗಳು ಎಂದು ಉಲ್ಲೇಖಿಸಲಾಗಿದೆ.

ಸಿಜೆಐ ವಿರುದ್ಧ ಸುಪ್ರೀಂ ಕೋರ್ಟ್ ಮಾಜಿ ಉದ್ಯೋಗಿ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಕುರಿತುಮೂವರು ನ್ಯಾಯಮೂರ್ತಿಗಳ ಸಮಿತಿ ತನಿಖೆ ನಡೆಸುತ್ತಿದ್ದು, ಶುಕ್ರವಾರಪ್ರಕರಣದ ಮೊದಲ ವಿಚಾರಣೆ ಪೂರ್ಣಗೊಳಿಸಿದೆ.

ಹೇಳಿಕೆ ದಾಖಲಿಸಿದ ಮಹಿಳೆ

ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಮಹಿಳೆ,ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್‌ನ ಆಂತರಿಕ ತನಿಖಾ ಸಮಿತಿ ಎದುರು ಶುಕ್ರವಾರ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಮಹಿಳಾ ನ್ಯಾಯಮೂರ್ತಿಗಳಾದ ಇಂದು ಮಲ್ಹೋತ್ರ ಹಾಗೂ ಇಂದಿರಾ ಬ್ಯಾನರ್ಜಿ ಅವರನ್ನೂ ಒಳಗೊಂಡ ಸಮಿತಿ ಎದುರು, ಮಹಿಳೆ ಹಾಗೂ ಸುಪ್ರೀಂ ಕೋರ್ಟ್‌ ಮುಖ್ಯ ಕಾಯರ್ದರ್ಶಿ ಹಾಜರಾಗಿದ್ದರು.

‘ಮುಖ್ಯ ಕಾರ್ಯದರ್ಶಿ ಎಲ್ಲಾ ದಾಖಲೆಗಳನ್ನು ಸಮಿತಿಗೆ ಹಾಜರುಪಡಿಸಿದರು. ಆದರೆ ಮಧ್ಯಾಹ್ನ 12.30ರಿಂದ 3.30ರವರೆಗೆ ನಡೆದ ವಿಚಾರಣೆ ವೇಳೆ,ಮಹಿಳೆ ಮಾತ್ರ ಇದ್ದರು. ವಿಚಾರಣೆ ಮಧ್ಯೆ ಕೊಂಚ ವಿರಾಮವನ್ನೂ ನೀಡಲಾಗಿತ್ತು’ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನ್ಯಾಯಮೂರ್ತಿ ಎನ್.ವಿ. ರಮಣ ಅವರು ಸಮಿತಿಯಿಂದ ಹೊರಹೋದ ಬಳಿಕ ಮತ್ತೊಬ್ಬ ಮಹಿಳಾ ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರನ್ನು ಸಮಿತಿಗೆ ಹೊಸದಾಗಿ ನೇಮಿಸಲಾಗಿತ್ತು. ಮುಂದಿನ ವಿಚಾರಣೆ ಸೋಮವಾರ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.