ದಲ್‌ಪತ್ (ಜಮ್ಮು ಮತ್ತು ಕಾಶ್ಮೀರ): ‘ಅಪ್ಪ, ನೀನೇಕೆ ಮೇಲೇಳುತ್ತಿಲ್ಲ. ನನಗೆ ಬೇರೇನೂ ಬೇಡ ಅಪ್ಪಾ. ದಯವಿಟ್ಟು ಮರಳಿ ಬಾ...’
ತ್ರಿವರ್ಣ ಧ್ವಜ ಹೊದ್ದಿದ್ದ ಶವಪೆಟ್ಟಿಗೆಯಲ್ಲಿ ನಿಸ್ತೇಜವಾಗಿ ಮಲಗಿದ್ದ ತನ್ನ ಅಕ್ಕರೆಯ ಅಪ್ಪನ ಮೊಗವನ್ನು ಕಂಡು 10 ವರ್ಷದ ಪಾವನಾ ಚಿಬ್ ಹೀಗೆ ರೋಧಿಸುತ್ತಿದ್ದಾಗ ನೆರೆದಿದ್ದವರ ಕಣ್ಣುಗಳು ತುಂಬಿಬಂದವು. ಮನಸ್ಸು ಭಾರವಾದವು.
ಪಾವನಾ, ಹುತಾತ್ಮ ಯೋಧ ನೀಲಂ ಸಿಂಗ್ ಅವರ ಮಗಳು. ರಜೌರಿ ಜಿಲ್ಲೆಯ ಕಾಂಡಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಉಗ್ರರು ನಡೆಸಿದ ಸ್ಫೋಟದಲ್ಲಿ ಮೃತಪಟ್ಟಿದ್ದ ಐವರು ಕಮಾಂಡೊಗಳಲ್ಲಿ ನೀಲಂ ಕೂಡ ಒಬ್ಬರು. ಅವರ ಮೃತದೇಹವನ್ನು ಶನಿವಾರ ಹುಟ್ಟೂರು ದಲ್‌ಪತ್‌ನ ಕೃಪಾಲ್‌ಪುರ ಗ್ರಾಮಕ್ಕೆ ತರಲಾಗಿತ್ತು. ಈ ವೇಳೆ ಕುಟುಂಬದವರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಪತ್ನಿ ವಂದನಾ, ಕಳೆಗುಂದಿದ್ದ ಪತಿಯ ಮೊಗವನ್ನು ಕೈಗಳಿಂದ ನೇವರಿಸುತ್ತಾ ಕುಸಿದು ಬಿದ್ದರು. ಏಳು ವರ್ಷದ ಮಗ ಅಂಕಿತ್ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ತಮ್ಮೂರಿನ ವೀರ ಪುತ್ರನನ್ನು ಕೊನೆಯ ಬಾರಿಗೆ ಕಣ್ತುಂಬಿಕೊಳ್ಳಲು ಬಂದಿದ್ದವರೂ ಆತನೊಂದಿಗಿನ ಒಡನಾಟ ನೆನೆದು ಗದ್ಗದಿತರಾದರು.
ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ನಾರ್ಥರ್ನ್ ಸೇನಾ ಕಮಾಂಡರ್ ಆಗಿರುವ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹಾಗೂ ಸೇನೆ ಮತ್ತು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಸರ್ಕಾರಿ ಗೌರವದೊಂದಿಗೆ ಹುತಾತ್ಮ ಸೈನಿಕರಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಮೃತದೇಹಗಳನ್ನು ಅವರ ತವರೂರಿಗೆ ಕಳುಹಿಸಲಾಯಿತು.
ಮೃತದೇಹವು ಕೃಪಾಲ್‌ಪುರ ಗ್ರಾಮ ತಲುಪುತ್ತಿದ್ದಂತೆ ಊರಿನವರು ಹಾಗೂ ಸಂಬಂಧಿಕರು ‘ನೀಲಂ ಸಿಂಗ್ ಅಮರವಾಗಲಿ’ ಎಂಬ ಘೋಷಣೆಯನ್ನು ಮೊಳಗಿಸಿದರು. ನೀಲಂ ಅವರ ತಮ್ಮ, ಸಿಐಎಸ್‌ಎಫ್ ಯೋಧ ಆನಂದ್ ಸಿಂಗ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
‘ಮಗನ ಬಗ್ಗೆ ಹೆಮ್ಮೆ ಇದೆ. ಆತ ತುಂಬಾ ಧೈರ್ಯಶಾಲಿಯಾಗಿದ್ದ. ಉಗ್ರರೊಂದಿಗೆ ಕಾದಾಡಿ ಪ್ರಾಣ ಬಿಟ್ಟಿದ್ದಾನೆ. ಆತ ಎಳವೆಯಲ್ಲೇ ಸೇನೆಗೆ ಸೇರುವ ಕನಸು ಕಂಡಿದ್ದ’ ಎಂದು ನೀಲಂ ಅವರ ತಂದೆ ಹರ್ದೇವ್ ಸಿಂಗ್ ಚಿಬ್ ನುಡಿದಿದ್ದಾರೆ.
ನೀಲಂ ಪರೋಪಕಾರಿಯಾಗಿದ್ದ. ಕಷ್ಟ ಎಂದವರಿಗೆ ಕೈಲಾದ ಸಹಾಯ ಮಾಡುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
‘ಎರಡು ತಿಂಗಳ ಹಿಂದೆ ಮದುವೆಯಾಗಿದ್ದ’ (ಡಾರ್ಜಿಲಿಂಗ್ ವರದಿ): ಉಗ್ರರ ದಾಳಿಯಲ್ಲಿ ಮೃತಪಟ್ಟಿರುವ ಮತ್ತೊಬ್ಬ ಯೋಧ ಸಿದ್ಧಾಂತ್ ಚೆಟ್ರಿ, ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.
ಚೆಟ್ರಿ ಅವರು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಬಿಜಾನ್‌ಬರಿ ಪ್ರದೇಶದ ನಿವಾಸಿಯಾಗಿದ್ದರು. ಇವರ ಅಣ್ಣ ಓಂ ಪ್ರಕಾಶ್ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದರು.
‘ಸಿದ್ಧಾಂತ್ ದೇಶ ಸೇವೆಯ ಹಂಬಲ ಹೊತ್ತಿದ್ದ. 2020ರಲ್ಲಿ ಸೇನೆಗೆ ಸೇರಿದ್ದ ಆತ ಪರಾಕ್ರಮಿಯಾಗಿದ್ದ. ಮದುವೆ ಮುಗಿಸಿಕೊಂಡು 15 ದಿನಗಳ ಹಿಂದೆಯಷ್ಟೇ ಆತ ಕರ್ತವ್ಯಕ್ಕೆ ಮರಳಿದ್ದ’ ಎಂದು ಓಂ ಪ್ರಕಾಶ್ ಹೇಳಿದ್ದಾರೆ.
Quote - ಕೋಟ್ಸ್.. ಮಗ 2003ರಲ್ಲಿ ಸೇನೆಗೆ ಸೇರಿದ್ದ. ಕರ್ತವ್ಯ ನಿಷ್ಠನಾಗಿದ್ದ ಆತ ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ. ಟೀ ಕುಡಿದು ಬಳಿಕ ಹೊರಟೇ ಬಿಟ್ಟಿದ್ದ–ಹರ್ದೇವ್ ಸಿಂಗ್ ಚಿಬ್ ಹುತಾತ್ಮ ಯೋಧ ನೀಲಂ ಸಿಂಗ್ ತಂದೆ
ರಾಜನಾಥ್‌ರಿಂದ ಭದ್ರತಾ ಪರಿಶೀಲನೆ
ರಜೌರಿ/ಜಮ್ಮು (ಪಿಟಿಐ): ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಜೌರಿ ಹಾಗೂ ಪೂಂಛ್‌ಗೆ ಶನಿವಾರ ಭೇಟಿ ನೀಡಿ ಭದ್ರತಾ ಪರಿಸ್ಥಿತಿ ಅವಲೋಕಿಸಿದ್ದಾರೆ. ಈ ಜಿಲ್ಲೆಗಳಲ್ಲಿ 2021ರ ಅಕ್ಟೋಬರ್‌ನಿಂದ ಈವರೆಗೆ ಎಂಟು ಭಯೋತ್ಪಾದನಾ ದಾಳಿಗಳು ನಡೆದಿದ್ದು 26 ಸೈನಿಕರು ಸೇರಿ ಒಟ್ಟು 35 ಮಂದಿ ಅಸುನೀಗಿದ್ದಾರೆ. ‘ಜಮ್ಮುವಿನಲ್ಲಿ ಕೆಲ ಸಮಯ ಕಳೆದ ರಾಜನಾಥ್ ಅಲ್ಲಿಂದ ರಜೌರಿಗೆ ಪ್ರಯಾಣ ಬೆಳೆಸಿದರು.
ಅಲ್ಲಿನ ‘ಏಸ್ ಆಫ್ ಸ್ಪೇಡ್ಸ್’ ವಿಭಾಗೀಯ ಕೇಂದ್ರ ಕಚೇರಿಗೆ ಭೇಟಿ ನೀಡಿ ಯೋಧರೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ಅವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಾಗೂ ಇತರ ಅಧಿಕಾರಿಗಳು ಇದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಾರ್ಥರ್ನ್ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಶನಿವಾರ ಬೆಳಿಗ್ಗೆ ಎನ್‌ಕೌಂಟರ್ ಸ್ಥಳಕ್ಕೆ ಭೇಟಿ ನೀಡಿದ್ದರು. ‘ಗ್ರೌಂಡ್ ಕಮಾಂಡರ್’ಗಳು ‘ಆಪರೇಷನ್ ತ್ರಿನೇತ್ರ’ದ ಕುರಿತು ಅವರಿಗೆ ಮಾಹಿತಿ ಒದಗಿಸಿದ್ದಾರೆ.
ಉಗ್ರನ ಹತ್ಯೆಗೈದ ಯೋಧರು
ಶ್ರೀನಗರ: ಕಾಂಡಿ ಅರಣ್ಯ ಪ್ರದೇಶದಲ್ಲಿ ‘ಆಪರೇಷನ್ ತ್ರಿನೇತ್ರ’ ಕಾರ್ಯಾಚರಣೆ ಕೈಗೊಂಡಿರುವ ಸೇನಾ ಪಡೆ ಶನಿವಾರ ಉಗ್ರನೊಬ್ಬನನ್ನು ಹತ್ಯೆ ಮಾಡಿದೆ. ‘ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ ಸಿಆರ್‌ಪಿಎಫ್ ಸಿಬ್ಬಂದಿಯ ಸಹಯೋಗದಲ್ಲಿ ಸೇನೆಯು ಜಂಟಿ ಕಾರ್ಯಾಚರಣೆ ಕೈಗೊಂಡಿದೆ.
ಶನಿವಾರ ಬೆಳಿಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರನೊಬ್ಬನನ್ನು ಹೊಡೆದುರುಳಿಸಲಾಗಿದೆ. ಮತ್ತೊಬ್ಬ ಗಾಯಗೊಂಡಿದ್ದಾನೆ’ ಎಂದು ಸೇನಾ ಪ್ರಕಟಣೆ ತಿಳಿಸಿದೆ. ‘ಎನ್‌ಕೌಂಟರ್ ಸ್ಥಳದಲ್ಲಿ ಒಂದು ಎಕೆ–56 ರೈಫಲ್ ನಾಲ್ಕು ಮ್ಯಾಗಜೀನ್ 56 ಬುಲೆಟ್ ಒಂದು 9 ಎಂ.ಎಂ ಪಿಸ್ತೂಲ್ ಮೂರು ಗ್ರೆನೇಡ್‌ಗಳು ಸ್ಫೋಟಕ ತುಂಬಿದ್ದ ಚೀಲ ಪತ್ತೆಯಾಗಿದ್ದು ಅವುಗಳನ್ನು ಜಪ್ತಿ ಮಾಡಲಾಗಿದೆ. ರಜೌರಿ ಫೂಂಛ್‌ನ ಸುತ್ತಲಿನ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಪ್ರತಿಕೂಲ ಹವಾಮಾನವು ಶೋಧ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ’ ಎಂದು ಹೇಳಿದೆ.
ದಶಕದ ಹಿಂದೆ ರಜೌರಿ ಹಾಗೂ ಪೂಂಛ್ ಜಿಲ್ಲೆಗಳನ್ನು ಭಯೋತ್ಪಾದನಾ ಮುಕ್ತ ಪ್ರದೇಶಗಳೆಂದು ಘೋಷಿಸಲಾಗಿತ್ತು. ಈ ಜಿಲ್ಲೆಗಳಲ್ಲಿ ಕಳೆದ 18 ತಿಂಗಳಲ್ಲಿ ಸರಣಿ ಉಗ್ರ ದಾಳಿಗಳು ನಡೆದಿವೆ. ‘ಉಗ್ರರು ಅಡಗಿಕೊಂಡಿರುವ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿದ್ದ ಸೇನಾ ಸಿಬ್ಬಂದಿ 250ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ತೆರೆಮರೆಯಲ್ಲಿ ಇದ್ದುಕೊಂಡು ಉಗ್ರರಿಗೆ ನೆರವು ಒದಗಿಸುತ್ತಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ’ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
‘ಉಗ್ರರು ಈಗ ನಾಗರಿಕರು ಹಾಗೂ ಭದ್ರತಾ ಪಡೆಗಳ ಮೇಲೆ ಸ್ಫೋಟಕ ಸಾಧನಗಳನ್ನು ಬಳಸಿ ದಾಳಿ ನಡೆಸುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ. ರಜೌರಿ ಜಿಲ್ಲೆಯ ಧಾಂಗ್ರಿ ಗ್ರಾಮದಲ್ಲಿ ಈ ವರ್ಷದ ಆರಂಭದಲ್ಲಿ ನಡೆದಿದ್ದ ಎರಡು ಪ್ರತ್ಯೇಕ ದಾಳಿಗಳಲ್ಲಿ ಒಟ್ಟು ಏಳು ನಾಗರಿಕರು ಉಗ್ರರಿಂದ ಹತರಾಗಿದ್ದರು. **
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.