ಸುಲ್ತಾನಪುರ (ಉತ್ತರಪ್ರದೇಶ): ‘ಮುಸ್ಲಿಮರು ನನಗೇ ಮತ ಹಾಕಬೇಕು. ಏಕೆಂದರೆ ನೀವು ನಾಳೆ ಯಾವುದಾದರೂ ಕೆಲಸಕ್ಕೆಂದು ನನ್ನ ಬಳಿ ಬರಬೇಕಾಗುತ್ತದೆ’ ಎಂದು ಸುಲ್ತಾನಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿ ಹೇಳಿದ್ದಾರೆ.
ಮುಸ್ಲಿಮರ ಪ್ರಾಬಲ್ಯವಿರುವ ತೂರಬ್ಖನಿ ಪ್ರದೇಶದಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.
‘ನೋಡಿ, ಈ ಕ್ಷೇತ್ರದ ಫಲಿತಾಂಶ ಈಗಾಗಲೇ ನಿರ್ಧಾರವಾಗಿ ಹೋಗಿದೆ. ಇಲ್ಲಿ ಗೆಲ್ಲುವುದು ನಾನೇ ಎಂಬುದು ನಿಶ್ಚಿತ. ಜನರ ಪ್ರೀತಿ ಮತ್ತು ನೆರವಿನಿಂದ ನಾನು ಗೆಲ್ಲುತ್ತಿದ್ದೇನೆ. ಆದರೆ ನನಗೆ ಮುಸ್ಲಿಮರು ಮತ ಹಾಕಲಿಲ್ಲ ಅಂದರೆ ಅದು ಚೆನ್ನಾಗಿರುವುದಿಲ್ಲ. ಅದರಿಂದ ನನಗೆ ಇರುಸುಮುರುಸಾಗುತ್ತದೆ’ ಎಂದು ಅವರು ಹೇಳಿದ್ದಾರೆ.
‘ನೀವೆಲ್ಲಾ ಫಿಲಿಬಿಟ್‌ಗೆ ಹೋಗಿ ವಿಚಾರಿಸಿ. ಅಲ್ಲಿ ನಾನು ತಪ್ಪು ಮಾಡಿದ್ದೇನೆ, ಕೆಲಸ ಮಾಡಿಲ್ಲ ಎಂದು ಯಾರೊಬ್ಬರು ಹೇಳಿದರೂ ನೀವು ನನಗೆ ಮತ ನೀಡಬೇಡಿ. ಆದರೆ ಪರಿಸ್ಥಿತಿ ಹಾಗಾಗುವುದಿಲ್ಲ. ನಾನು ಇಲ್ಲಿಗೆ ಮುಕ್ತ ಮನಸ್ಸಿನಿಂದ ಬಂದಿದ್ದೇನೆ. ಹೀಗಾಗಿ ನೀವೆಲ್ಲಾ (ಮುಸ್ಲಿಮರು) ನನಗೆ ಮತ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
‘ಇಲ್ಲಿ ಗೆಲ್ಲುವುದು ನಾನೇ. ಹೀಗಾಗಿ ನಾಳೆ ಯಾವುದಾದರೂ ಕೆಲಸ ಹಿಡಿದುಕೊಂಡು ನೀವು (ಮುಸ್ಲಿಮರು) ನನ್ನ ಬಳಿ ಬಂದೇ ಬರುತ್ತೀರಿ. ಆಗ ನಾನು ಕೆಲಸ ಮಾಡಿಕೊಡಬೇಕೇ ಬೇಡವೇ ಎಂದು ಯೋಚಿಸುವಂತೆ ಆಗಬಾರದು. ಇದು ನಾನು ನಿಮಗೆ ನೀಡುತ್ತಿರುವ ಸಂದೇಶ. ಈ ಸಂದೇಶವನ್ನು ಉಳಿದ ಎಲ್ಲರಿಗೂ ತಲುಪಿಸಿ’ ಎಂದು ಅವರು ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.