ಶ್ರೀನಗರ: ಯೋಗ ದಿನದಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶ್ರೀನಗರ ತಲುಪಿದರು.
ನಾಳೆ (ಜೂನ್ 21) ಯೋಗ ದಿನದಲ್ಲಿ ಪಾಲ್ಗೊಳ್ಳುವುದರ ಜತೆಗೆ ನೀರಾವರಿ, ಶಿಕ್ಷಣ ಸೇರಿದಂತೆ ವಿವಿಧ ₹1,500 ಕೋಟಿಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಈ ಬಗ್ಗೆ ಮೋದಿ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕ ಮೋದಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ.
ನಾಳೆ ಬೆಳಿಗ್ಗೆ 6.30ಕ್ಕೆ ಶ್ರೀನಗರದ ದಾಲ್ ಸರೋವರದ ತಟದಲ್ಲಿನ ಶೇರ್–ಐ–ಕಾಶ್ಮೀರ್ ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ (ಎಸ್‌ಕೆಐಸಿಸಿ) ಆಯೋಜಿಸಿರುವ 10ನೇ ಅಂತರರಾಷ್ಟ್ರೀಯ ಯೊಗ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ 7 ಸಾವಿರಕ್ಕೂ ಹೆಚ್ಚು ಜನರು ಮೋದಿಯೊಂದಿಗೆ ಭಾಗವಹಿಸಲಿದ್ದಾರೆ. ಕಳೆದ ಮೂರು ದಿನಗಳಿಂದ ಎಲ್ಲರಿಗೂ ಆಸನಗಳ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಗಿ ಭದ್ರತೆ
ಪ್ರಧಾನಿ ಭೇಟಿ ಹಿನ್ನೆಲೆ ಶ್ರೀನಗರದಾದ್ಯಂತ ಭದ್ರತೆ ಬಿಗಿಗೊಳಿಸಲಾಗಿದ್ದು, ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಎಸ್‌ಕೆಐಸಿಸಿಗೆ ಸಾಗುವ ರಸ್ತೆಗಳನ್ನು ಸೀಲ್ ಮಾಡಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ ಕಾರ್ಯಕ್ರಮ ನಡೆಯುವ ಜಾಗವನ್ನು ‘ತಾತ್ಕಾಲಿಕ ರೆಡ್ ಝೋನ್’ ಎಂದು ಘೋಷಿಸಲಾಗಿದ್ದು ಡ್ರೋನ್ ಮತ್ತು ಕ್ವಾಡ್‌ಕಾಪ್ಟರ್ ಭದ್ರತೆ ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.