ADVERTISEMENT

ಸಂಸದರು ಸ್ವವಿಮರ್ಶೆ ಮಾಡಿಕೊಳ್ಳಲಿ: ಪಕ್ಷಗಳ ಸಂಸದರನ್ನು ಉದ್ದೇಶಿಸಿ ಮೋದಿ ಹೇಳಿಕೆ

ಅಮಾನತುಗೊಂಡಿದ್ದ ವಿಪಕ್ಷಗಳ ಸಂಸದರನ್ನು ಉದ್ದೇಶಿಸಿ ಮೋದಿ ಹೇಳಿಕೆ

ಪಿಟಿಐ
Published 31 ಜನವರಿ 2024, 15:20 IST
Last Updated 31 ಜನವರಿ 2024, 15:20 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ (ಪಿಟಿಐ): ‘ಕಲಾಪಕ್ಕೆ ಅಡ್ಡಿಯುಂಟು ಮಾಡುವ ಸಂಸದರು ಲೋಕಸಭೆ ಚುನಾವಣೆಗೂ ಮುನ್ನ ಸ್ವವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ ಅಧಿವೇಶನದ ಮೊದಲ ದಿನವಾದ ಬುಧವಾರ ಹೇಳಿದರು.

ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಅಮಾನತುಗೊಂಡಿದ್ದ 146 ಸಂಸದರನ್ನು ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡಿದ ಅವರು, ‘ಸಂಸತ್ ಕಲಾಪಗಳಿಗೆ ಪದೇಪದೇ ಅಡ್ಡಿಪಡಿಸುವವರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರುತ್ತಿದ್ದಾರೆ’ ಎಂದು ಆಕ್ಷೇಪಿಸಿದರು.

ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ’ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ ಅಥವಾ ಕಲಾಪಕ್ಕೆ ಅಡ್ಡಿಪಡಿಸಿದ ಸಂಸದರನ್ನು ಜನರು ನೆನಪಿಟ್ಟುಕೊಳ್ಳುವುದಿಲ್ಲ. ಸಂಸತ್ತಿನಲ್ಲಿ ಉಪಯುಕ್ತ ಸಲಹೆ ನೀಡಿದವರು, ಅಧಿವೇಶನಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡವರನ್ನು ಜನರು ನೆನಪಿಟ್ಟುಕೊಳ್ಳುತ್ತಾರೆ. ಸಂಸದರು ತಮ್ಮ ಸಂಸತ್‌ ಕ್ಷೇತ್ರಗಳಲ್ಲಿ ಜನರನ್ನು ವಿಚಾರಿಸಿದರೆ ಈ ಕುರಿತು ಅವರಿಗೇ ತಿಳಿಯುತ್ತದೆ‘ ಎಂದು ಮೋದಿ ಹೇಳಿದರು.

ADVERTISEMENT

ಖರ್ಗೆ ಕಿಡಿ: ಪ್ರಧಾನಿ ಅವರ ಹೇಳಿಕೆಯನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಲವಾಗಿ ಖಂಡಿಸಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನವನ್ನು ಉಲ್ಲಂಘಿಸುತ್ತಿದೆ ಮತ್ತು ವಿರೋಧ ಪಕ್ಷಗಳ ಧ್ವನಿ ಅಡಗಿಸುತ್ತಿದೆ ಎಂದು ಆರೋಪಿಸಿದ್ದಾರೆ

’ವಿರೋಧ ಪಕ್ಷಗಳ 146 ಸಂಸದರನ್ನು ಅಮಾನತಿನಲ್ಲಿ ಇರಿಸಿ, ಮೂರು ದಿನಗಳಲ್ಲಿ 14 ಮಸೂದೆಗಳನ್ನು ಸಂಸತ್ತಿನಲ್ಲಿ ಜಾರಿಗೊಳಿಸಲಾಗಿದೆ. ಸಂಸದೀಯ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವಲ್ಲಿ ಅವರ ಸರ್ಕಾರದ ಪಾತ್ರವೇನು ಎಂಬುದನ್ನು ಮೋದಿ ಅವರಿಗೆ ನೆನಪಿಸಲು ಬಯಸುತ್ತೇವೆ‘ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.