ADVERTISEMENT

ಪ್ರಧಾನಿಯಿಂದಲೇ ಜನಾಂಗೀಯ ದ್ವೇಷದ ಮಾತು: ಚಿದಂಬರಂ

ಪಿಟಿಐ
Published 9 ಮೇ 2024, 15:34 IST
Last Updated 9 ಮೇ 2024, 15:34 IST
ಚಿದಂಬರಂ
ಚಿದಂಬರಂ   

ನವದೆಹಲಿ: ಸ್ಯಾಮ್‌ ಪಿತ್ರೋಡಾ ಅವರ ಹೇಳಿಕೆಗಳನ್ನು ಖಂಡಿಸುವ ಭರದಲ್ಲಿ ಚರ್ಮದ ಬಣ್ಣದ ವಿಷಯವನ್ನು ಚುನಾವಣಾ ಭಾಷಣಗಳಲ್ಲಿ ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ  ನಡೆಯೇ ‘ಜನಾಂಗೀಯ ದ್ವೇಷ’ವನ್ನು ತೋರಿಸುತ್ತದೆ ಎಂದು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಗುರುವಾರ ಟೀಕಿಸಿದ್ದಾರೆ.

ಈ ಹಿಂದೆ, ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯಶವಂತ ಸಿನ್ಹಾ ಅವರಿಗೆ ಚರ್ಮದ ಬಣ್ಣದ ಕಾರಣಕ್ಕಾಗಿ ವಿರೋಧ ಪಕ್ಷಗಳು ಅವರಿಗೆ ಬೆಂಬಲ ಸೂಚಿಸಿರಲಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಕಳೆದ ಬಾರಿ, ರಾಷ್ಟ್ರಪತಿ ಆಯ್ಕೆಗಾಗಿ ನಡೆದಿದ್ದ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಮತ್ತು ಸಿನ್ಹಾ ಅವರಿಬ್ಬರೇ ಅಭ್ಯರ್ಥಿಗಳಾಗಿದ್ದರು ಎಂದು ಹೇಳಿದ್ದಾರೆ.

ADVERTISEMENT

‘ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಮುರ್ಮು ಅವರನ್ನು ಬೆಂಬಲಿಸಿದ್ದರೆ, ಕಾಂಗ್ರೆಸ್‌ ಸೇರಿದಂತೆ 17 ವಿರೋಧ ಪಕ್ಷಗಳು ಸಿನ್ಹಾ ಅವರನ್ನು ಬೆಂಬಲಿಸಿದ್ದವು ಎಂದೂ ಅವರು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

‘ರಾಷ್ಟ್ರಪತಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ, ಚರ್ಮದ ಬಣ್ಣದ ಆಧಾರದಲ್ಲಿ ಅಭ್ಯರ್ಥಿಯೊಬ್ಬರಿಗೆ ಬೆಂಬಲಿಸಿರಲಿಲ್ಲ. ಇನ್ನೊಂದೆಡೆ, ಅಭ್ಯರ್ಥಿಯೊಬ್ಬರ ವಿರುದ್ಧ ನಿಲುವು ತೆಗೆದುಕೊಳ್ಳುವುದಕ್ಕೂ ಚರ್ಮದ ಬಣ್ಣವೇ ಕಾರಣವಾಗಿರಲಿಲ್ಲ. ಒಬ್ಬ ಅಭ್ಯರ್ಥಿಗೆ ಬೆಂಬಲಿಸುವುದು ಇಲ್ಲವೇ ವಿರೋಧ ವ್ಯಕ್ತಪಡಿಸುವುದು ರಾಜಕೀಯ ನಿರ್ಧಾರ. ಮತದಾನ ಮಾಡುವವರು ತಮ್ಮ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿಯೇ ಇರುತ್ತಾರೆ’ ಎಂದು ಚಿದಂಬರಂ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಪ್ರತಿಭಟನೆ

ನವದೆಹಲಿ:  ಸ್ಯಾಮ್‌ ಪಿತ್ರೋಡಾ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿ ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ನಾಯಕರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಅಕ್ಬರ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಕೇಂದ್ರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚದೇವ್‌ ‘ವಿವಿಧತೆ ಎಂಬುದು ಭಾರತದ ದೊಡ್ಡ ಶಕ್ತಿಯಾಗಿದ್ದು ದೇಶದ ಒಗ್ಗಟ್ಟಿಗೂ ಇದೇ ಕಾರಣವಾಗಿದೆ’ ಎಂದರು.

‘ಪಿತ್ರೋಡಾ ನೀಡಿರುವ ಜನಾಂಗೀಯ ದ್ವೇಷದ ಹೇಳಿಕೆಗಳು ದೇಶದ ಏಕತೆಯನ್ನು ಅವಮಾನಿಸಿವೆ. ಇದು ಏಕಾಏಕಿ ಹೊರಹೊಮ್ಮಿರುವ ಹೇಳಿಕೆಯಲ್ಲ. ಲೋಕಸಭಾ ಚುನಾವಣೆಯ ಮೂರು ಹಂತಗಳ ಮತದಾನದ ನಂತರ ಪಕ್ಷ ಪರಾಭವಗೊಳ್ಳುವುದು ಖಚಿತಗೊಂಡ ಮೇಲೆ ಪಕ್ಷದ ನಾಯಕರು ಇಂತಹ ಜನಾಂಗೀಯ ದ್ವೇಷದ ಹೇಳಿಕೆಗಳನ್ನು ನೀಡಿದ್ದಾರೆ’ ಎಂದೂ ಟೀಕಿಸಿದರು.

ರಾಹುಲ್‌ ಸಲಹೆಗಾರನಿಂದ ದೇಶ ವಿಭಜನೆ ಮಾತು: ನಡ್ಡಾ

ಚಿತ್ರಕೂಟ(ಉತ್ತರ ಪ್ರದೇಶ): ಕಾಂಗ್ರೆಸ್‌ ಮುಖಂಡ ಸ್ಯಾಮ್‌ ಪಿತ್ರೋಡಾ ಅವರ ಹೇಳಿಕೆಗಳನ್ನು ಖಂಡಿಸಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ‘ರಾಹುಲ್‌ ಗಾಂಧಿ ಅವರ ಸಲಹೆಗಾರ ಭಾರತವನ್ನು ಚರ್ಮದ ಬಣ್ಣದ ಆಧಾರದ ಮೇಲೆ ವಿಭಜನೆ ಮಾಡುವ ಬಗ್ಗೆ ಮಾತನಾಡಿದ್ದಾರೆ’ ಎಂದು ಟೀಕಿಸಿದರು.

ಬಾಂದಾ ಲೋಕಸಭಾ ವ್ಯಾಪ್ತಿಯ ಚಿತ್ರಕೂಟದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್‌ ನಾಯಕರು ದೇಶದ ಸಂಸ್ಕೃತಿ ಜೊತೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಟೀಕಿಸಿದರು. ‘ಧರ್ಮ ಆಧರಿತ ಮೀಸಲಾತಿಯನ್ನು ನೀಡುವ ಮೂಲಕ ದಲಿತರು ಹಿಂದುಳಿದವರು ಹಾಗೂ ಬುಡಕಟ್ಟು ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಕಾಂಗ್ರೆಸ್‌ ಹವಣಿಸುತ್ತಿದೆ’ ಎಂದೂ ನಡ್ಡಾ ಆರೋಪಿಸಿದರು.

ಕಾಂಗ್ರೆಸ್‌ ಕ್ಷಮೆ ಯಾಚಿಸಲಿ–ಸಿ.ಎಂ ಆದಿತ್ಯನಾಥ ಆಗ್ರಹ 

ಲಖನೌ: ಕಾಂಗ್ರೆಸ್‌ ಮುಖಂಡ ಸ್ಯಾಮ್‌ ಪಿತ್ರೋಡಾ ನೀಡಿರುವ ‘ಜನಾಂಗೀಯ ದ್ವೇಷ’ದ  ಹೇಳಿಕೆಗಳನ್ನು ಕಟುವಾಗಿ ಟೀಕಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ವಿಚಾರವಾಗಿ ಕಾಂಗ್ರೆಸ್‌ ಪಕ್ಷ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಗುರುವಾರ ಆಗ್ರಹಿಸಿದ್ದಾರೆ. \

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮೈಬಣ್ಣ ಹಾಗೂ ಜನಾಂಗದ ಗುಣಲಕ್ಷಣಗಳ ಆಧಾರದ ಮೇಲೆ ಜನರನ್ನು ವಿಭಜನೆ ಮಾಡುವ ಯತ್ನಗಳನ್ನು ಕಾಂಗ್ರೆಸ್‌ ಮುಂದುವರಿಸಿದೆ. 1947ರಲ್ಲಿ ದೇಶ ವಿಭಜನೆಯಾಗಲು ಕಾಂಗ್ರೆಸ್‌ ಪಕ್ಷವೇ ಕಾರಣ’ ಎಂದು ಆರೋಪಿಸಿದರು.

ಹೇಳಿಕೆ ಸಮರ್ಥಿಸಿದ ಅಧೀರ್

ಬಹರಾಂಪುರ(ಪಶ್ಚಿಮ ಬಂಗಾಳ):ಪಕ್ಷದ ಮುಖಂಡ ಸ್ಯಾಮ್‌ ಪಿತ್ರೋಡಾ ನೀಡಿರುವ ‘ಜನಾಂಗೀಯ ಭೇದಭಾವ’ದ ಹೇಳಿಕೆಗಳನ್ನು ಕಾಂಗ್ರೆಸ್‌ನ ಪಶ್ಚಿಮ ಬಂಗಾಳ ಅಧ್ಯಕ್ಷ ಅಧೀರ್ ರಂಜನ್‌ ಚೌಧರಿ ಗುರುವಾರ ಸಮರ್ಥಿಸಿಕೊಂಡಿದ್ದಾರೆ.

‘ಆಫ್ರಿಕಾದವರಂತೆ ಭಾರತವೂ ಕೂಡ ಕಪ್ಪ ಚರ್ಮದ ಜನರನ್ನು ಹೊಂದಿದೆ’ ಎಂದು ಹೇಳಿದ್ದಾರೆ. ‘ನಮ್ಮದ ದೇಶದ ವಿವಿಧ ಭೌಗೋಳಿಕ ಪ್ರದೇಶಗಳ ಗುಣಲಕ್ಷಣ ಪ್ರಕಾರ ಪ್ರಾದೇಶಿಕ ಗುಣಲಕ್ಷಣಗಳಲ್ಲಿ ವ್ಯತ್ಯಾಸವಿದೆ. ಪ್ರೊಟೊ ಆಸ್ಟ್ರೇಲಿಯನ್‌ ವರ್ಗ ಮಂಗೋಲಾಯ್ಡ್‌ ವರ್ಗ ಹಾಗೂ ಕಪ್ಪು ವರ್ಣದ ಜನರನ್ನು ಭಾರತ ಹೊಂದಿದೆ. ಇದನ್ನೇ ಅಲ್ಲವೇ ಶಾಲೆಗಳಲ್ಲಿ ನಮಗೆ ಕಲಿಸಿದ್ದು. ಪ್ರತಿಯೊಬ್ಬರು ಒಂದೇ ರೀತಿ ಕಾಣುವುದಿಲ್ಲ. ಕೆಲವು ಕಪ್ಪಗೆ ಇನ್ನೂ ಕೆಲವರು ಬೆಳ್ಳಗಿರುತ್ತಾರೆ’ ಎಂದೂ ಹೇಳಿದ್ದಾರೆ.

‘ವೈಯಕ್ತಿಕ ಅಭಿಪ್ರಾಯಗಳ ಕುರಿತಾಗಿ ನಾನು ಹೆಚ್ಚಿಗೆ ಮಾತನಾಡುವುದಿಲ್ಲ’ ಎಂದು ಅವರು ಇಲ್ಲಿನ ಪಕ್ಷದ ಕಚೇರಿಯಲ್ಲಿ ಹೇಳಿದ್ದಾರೆ.  ಅಧೀರ್‌ ರಂಜನ್‌ ಚೌಧರಿ ಅವರು ಬಹರಾಂಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.