ADVERTISEMENT

ಪಿ.ಎಂ ಕೇರ್ಸ್ ನಿಧಿ ಸರ್ಕಾರದ್ದಲ್ಲ: ಪ್ರಧಾನಿ ಕಚೇರಿ ಸ್ಪಷ್ಟನೆ

ಆರ್‌ಟಿಐ ಕಾಯ್ದೆಯಡಿ ಮಾಹಿತಿ ನೀಡಲಾಗದು; ದೆಹಲಿ ಹೈಕೋರ್ಟ್‌ಗೆ ಪಿಎಂಒ ಕಚೇರಿ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 3:15 IST
Last Updated 1 ಫೆಬ್ರುವರಿ 2023, 3:15 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ‘ಪಿ.ಎಂ ಕೇರ್ಸ್‌ ನಿಧಿಯು ಸರ್ಕಾರದ ನಿಧಿಯಲ್ಲ. ಈ ನಿಧಿಗೆ ನೀಡುವ ದೇಣಿಗೆಗಳು ಸರ್ಕಾರದ ಬೊಕ್ಕಸಕ್ಕೂ ಸೇರುವುದಿಲ್ಲ. ಹೀಗಾಗಿ, ಈ ನಿಧಿಗೆ ಸಂಬಂಧಿಸಿ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಮೂರನೇ ವ್ಯಕ್ತಿಗೆ ಮಾಹಿತಿ ನೀಡಲಾಗದು‘ ಎಂದು ಪ್ರಧಾನಮಂತ್ರಿಗಳ ಕಚೇರಿ (ಪಿಎಂಒ) ಸ್ಪಷ್ಟಪಡಿಸಿದೆ.

ಪ್ರಧಾನಮಂತ್ರಿಗಳ ಕಚೇರಿಯಲ್ಲಿ (ಪಿಎಂಒ) ಪಿ.ಎಂ ಕೇರ್ಸ್‌ ನಿಧಿಯ ಮೇಲ್ವಿಚಾರಣೆಯನ್ನು ಗಮನಿಸುವ ಅಧೀನ ಕಾರ್ಯದರ್ಶಿಯು ಈ ಸಂಬಂಧ ದೆಹಲಿ ಹೈಕೋರ್ಟ್‌ಗೆ ಲಿಖಿತವಾಗಿ ಪ್ರಮಾಣಪತ್ರ ಸಲ್ಲಿಸಿದ್ದಾರೆ.

‘ಪಿ.ಎಂ.ಕೇರ್ಸ್ ಟ್ರಸ್ಟ್‌ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತದ ಮಹಾಲೇಖಪಾಲರು ರಚಿಸುವ ತಂಡದಿಂದ ಆಯ್ಕೆ ಮಾಡಲಾಗುವ ಲೆಕ್ಕಪರಿಶೋಧಕರೇ ಇದರ ವಹಿವಾಟಿನ ಲೆಕ್ಕಪರಿಶೋಧನೆಯನ್ನು ನಡೆಸಲಿದ್ದಾರೆ’ ಎಂದು ಅವರು ಪ್ರಮಾಣಪತ್ರದಲ್ಲಿ ವಿವರಿಸಿದ್ದಾರೆ.

ADVERTISEMENT

ಈ ಬಗ್ಗೆ ಆರ್‌ಟಿಐ ಕಾಯ್ದೆಯಡಿ ಮೂರನೇ ವ್ಯಕ್ತಿಗೆ ಮಾಹಿತಿ ನೀಡಲಾಗದು. ಇದರ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೇಂದ್ರ, ರಾಜ್ಯ ಸರ್ಕಾರಗಳ ನಿಯಂತ್ರಣ ಇರುವುದಿಲ್ಲ. ಈ ಟ್ರಸ್ಟ್ ಅನ್ನು ಸಂವಿಧಾನದಡಿ ಅಥವಾ ಯಾವುದೇ ಕಾಯ್ದೆಯಡಿ ರಚಿಸಿಲ್ಲ. ಯಾವುದೇ ಸರ್ಕಾರಗಳ ಆರ್ಥಿಕ ಇಲಾಖೆಯ ನೆರವು ಪಡೆದಿಲ್ಲ, ನಿಯಂತ್ರಣಕ್ಕೂ ಒಳಪಡುವುದಿಲ್ಲ ಎಂದು ಲಿಖಿತ ಪ್ರಮಾಣಪತ್ರದಲ್ಲಿ ಪಿಎಂಒ ಕಚೇರಿ ಸ್ಪಷ್ಟಪಡಿಸಿದೆ.

ಪಿ.ಎಂ ಕೇರ್ಸ್ ನಿಧಿಯನ್ನು ಸಂವಿಧಾನದ ವ್ಯಾಪ್ತಿಗೆ ತರಬೇಕು ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಯಾಗಿ ಈ ಪ್ರಮಾಣಪತ್ರವನ್ನು ಸಲ್ಲಿಸಲಾಗಿದೆ. ಪಿ.ಎಂ. ಕೇರ್ಸ್ ನಿಧಿಯನ್ನು ಆರ್‌ಟಿಐ ಕಾಯ್ದೆಯಡಿ ಸಾರ್ವಜನಿಕ ಪ್ರಾಧಿಕಾರವಾಗಿ ಘೋಷಿಸಬೇಕು ಎಂದೂ ಮತ್ತೊಂದು ಅರ್ಜಿ ಸಲ್ಲಿಕೆಯಾಗಿತ್ತು.

ಈ ಕುರಿತ ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಹ್ಮಣಿಯಂ ಪ್ರಸಾದ್ ಅವರಿದ್ದ ನ್ಯಾಯಪೀಠವು, ಈ ಸಂಬಂಧ ಯಾವಾಗ ವಾದ ಮಂಡಿಸಲಾಗುತ್ತದೆ ಎಂದು ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಅವರ ಕಚೇರಿಯಿಂದ ಮಾಹಿತಿಯನ್ನು ಬಯಸಿತು.

ಪ್ರಮಾಣಪತ್ರ ಸಲ್ಲಿಸಿದ ಪಿಎಂಒ ಕಚೇರಿಯ ಅಧೀನ ಕಾರ್ಯದರ್ಶಿ ಪ್ರದೀಪ್‌ ಕುಮಾರ್ ಶ್ರೀವಾತ್ಸವ ಅವರು, ಪಿಎಂ ಕೇರ್ಸ್ ನಿಧಿಯು ಸಾರ್ವಜನಿಕ ಪ್ರಾಧಿಕಾರವಲ್ಲದ ಕಾರಣ ಈ ಅರ್ಜಿ ವಿಚಾರಣೆಗೆ ಸೂಕ್ತವಲ್ಲ ಎಂದು ಪ್ರತಿಪಾದಿಸಿದರು. ಪಿ.ಎಂ ಕೇರ್ಸ್ ಅನ್ನು ಸಾರ್ವಜನಿಕ ದತ್ತಿ ಸಂಸ್ಥೆಯಾಗಿ ರಚಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.