ADVERTISEMENT

ದೇಶದ ಅತಿ ಉದ್ದದ ರೈಲು ಸಂಚಾರ ಸೇತುವೆ ಮಾರ್ಗ ’ಬೋಗೀಬೀಲ್‌’; ಡಿ.25ಕ್ಕೆ ಉದ್ಘಾಟನೆ

ಏಜೆನ್ಸೀಸ್
Published 23 ಡಿಸೆಂಬರ್ 2018, 8:41 IST
Last Updated 23 ಡಿಸೆಂಬರ್ 2018, 8:41 IST
   

ನವದೆಹಲಿ: ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಶಂಕುಸ್ಥಾಪನೆ ಮಾಡಿದ್ದಬ್ರಹ್ಮಪುತ್ರ ನದಿಯ ಉತ್ತರ ತೀರದಿಂದ ದಕ್ಷಿಣಕ್ಕೆ ಸಂಪರ್ಕ ಕಲ್ಪಿಸುವ 4.94 ಕಿ.ಮೀ. ಉದ್ದದ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್‌ 25ರಂದು ಉದ್ಘಾಟಿಸಲಿದ್ದಾರೆ.

ಬೋಗೀಬೀಲ್‌ ಸೇತುವೆ ದೇಶದ ಅತ್ಯಂತ ಉದ್ದದ ರೈಲು ಸಂಚಾರಿ ಮಾರ್ಗವನ್ನು ಹೊಂದಿರುವ ಸೇತುವೆಯಾಗಿದೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಗಡಿ ಭಾಗದಿಂದ 20 ಕಿ.ಮೀ. ದೂರದಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡವಾಗಿ ನಿರ್ಮಾಣವಾಗಿರುವ ಸೇತುವೆಯು ಧೆಮಾಜೀ ಮತ್ತು ಡಿಬ್ರೂಗಢ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುತ್ತಿದೆ.

ಬೋಗೀಬೀಲ್‌ ಸೇತುವೆ ನಿರ್ಮಾಣಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ 1997ರಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದರು. ಆದರೆ, ಸೇತುವೆಯ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು 2002ರ ಏಪ್ರಿಲ್‌ನಲ್ಲಿ. ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದರು. 16 ವರ್ಷಗಳಲ್ಲಿ ಸೇತುವೆ ನಿರ್ಮಾಣದ ಅಂತಿಮ ಘಟ್ಟ ಅನೇಕ ಬಾರಿ ಮುಂದೂಡಲಾಗಿತ್ತು. ಡಿಸೆಂಬರ್‌ 2ರಂದು ಸೇತುವೆಯ ಮೇಲೆ ಮೊದಲ ಬಾರಿಗೆ ಸರಕು ಸಾಗಿಸುವ ರೈಲು ಸಂಚಾರ ನಡೆಸಿತು.

ADVERTISEMENT

ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಸರಕು ಸಾಗಣೆ ಉತ್ತಮ ಪಡಿಸುವ ನಿಟ್ಟಿನಲ್ಲಿ 4.94 ಕಿ.ಮೀ. ಉದ್ದದ ಬೋಗೀಬೀಲ್‌ ಸೇತುವೆ ಪ್ರಮುಖ ಯೋಜನೆಗಳಲ್ಲೊಂದಾಗಿದೆ.

ಭಾರತ ಮತ್ತು ಚೀನಾ ಸುಮಾರು 4,000 ಕಿ.ಮೀ. ಗಡಿ ಭಾಗವನ್ನು ಹಂಚಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.