ನವದೆಹಲಿ: ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೂನ್ 18ರಂದು ನರೇಂದ್ರ ಮೋದಿ ಅವರು, ಮೊದಲ ಬಾರಿಗೆ ವಾರಾಣಸಿಗೆ ಭೇಟಿ ನೀಡಲಿದ್ದಾರೆ.
ಇದೇ ವೇಳೆ ಪಿಎಂ–ಕಿಸಾನ್ ಯೋಜನೆಯ 17ನೇ ಕಂತಿನ ₹20 ಸಾವಿರ ಕೋಟಿ ಮೊತ್ತವನ್ನು ಬಿಡುಗಡೆ ಮಾಡಲಿದ್ದಾರೆ. ದೇಶದ 9.26 ಕೋಟಿ ರೈತರಿಗೆ ಇದರ ಪ್ರಯೋಜನ ಸಿಗಲಿದೆ.
ಕೃಷಿ ಮತ್ತು ಹೈನುಗಾರಿಕೆಯ ಬಲವರ್ಧನೆಗೆ ಕೇಂದ್ರ ಸರ್ಕಾರವು ‘ಕೃಷಿ ಸಖಿ’ ಯೋಜನೆಯನ್ನು ಜಾರಿಗೊಳಿಸಿದೆ. ಇದರಡಿ ಸ್ವಸಹಾಯ ಸಂಘದ 30 ಸಾವಿರ ಸದಸ್ಯೆಯರಿಗೆ ತರಬೇತಿ ನೀಡಲಾಗಿದ್ದು, ಅವರಿಗೆ ಇದೇ ಸಂದರ್ಭದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ‘ಹಿಂದಿನ ಎರಡು ಅವಧಿಯಲ್ಲಿಯೂ ಮೋದಿ ಅವರು ಕೃಷಿ ಕ್ಷೇತ್ರಕ್ಕೆ ಪ್ರಧಾನ ಆದ್ಯತೆ ನೀಡಿದ್ದರು.ದೇಶದ ಅನ್ನದಾತರ ಹಿತದೃಷ್ಟಿಯಿಂದ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಅನುಷ್ಠಾನಗೊಳಿಸಿದ್ದಾರೆ. ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ವೇಳೆ ಪಿಎಂ–ಕಿಸಾನ್ ಹಣ ಬಿಡುಗಡೆಗೆ ಮೊದಲ ಸಹಿ ಹಾಕಿದ್ದೇ ಇದಕ್ಕೆ ಸಾಕ್ಷಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.