ಕಾನ್ಪುರ: ತನ್ನ ಮನೆಯಲ್ಲಿ ₹200 ಕೋಟಿ ನಗದನ್ನು ಮುಚ್ಚಿಟ್ಟಿದ್ದ ಕಾನ್ಪುರದ ಸುಗಂಧ ದ್ರವ್ಯ ಉದ್ಯಮಿ ಪೀಯೂಷ್ ಜೈನ್ ವಿಚಾರವು ಈಗ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಇರುವ ಉತ್ತರ ಪ್ರದೇಶದಲ್ಲಿ, ಈ ವಿಚಾರವು ಈಗ ಆಡಳಿತ ಮತ್ತು ವಿರೋಧ ಪಕ್ಷದ ಪ್ರಚಾರದ ಅಂಶವಾಗಿದೆ.
‘ಈ ಹಿಂದೆ ಉತ್ತರ ಪ್ರದೇಶವನ್ನು ಆಳಿದ್ದ ಪಕ್ಷವು ಇಡೀ ರಾಜ್ಯಕ್ಕೆ ಭ್ರಷ್ಟಾಚಾರದ ಸುಗಂಧವನ್ನು ಹರಡಿತ್ತು. ಅದು ಈಗ ಎಲ್ಲರಿಗೂ ಕಾಣುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ. ಇಲ್ಲಿನ ಮೆಟ್ರೊ ರೈಲನ್ನು ಉದ್ಘಾಟಿಸಿ ಮಾತನಾಡಿದ ಅವರು ಅಖಿಲೇಶ್ ಯಾದವ್ ಅವರ ನೇತೃತ್ವದ ಹಿಂದಿನ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
‘ಡಬ್ಬಗಳಲ್ಲಿ ಇಟ್ಟಿದ್ದ ಕಂತೆಕಂತೆ ನೋಟನ್ನು ನೀವು ನೋಡಿದ್ದೀರಿ. ಬಹುಶಃ ಅವರು (ಎಸ್‌ಪಿ) ಇದನ್ನು ನಾವೇ ಮಾಡಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ ಕಾನ್ಪುರದ ಜನರಿಗೆ ಈ ವ್ಯವಹಾರ ಚೆನ್ನಾಗಿ ಅರ್ಥವಾಗುತ್ತದೆ’ ಎಂದು ಮೋದಿ ಹೇಳಿದ್ದಾರೆ.
‘ಇದು ಅವರ ಸಾಧನೆ. ನೋಟಿನ ಬೆಟ್ಟವು ಬಹಿರಂಗವಾಗಿದೆ. ಆದರೆ ಇದಕ್ಕೆ ತಾವೇ ಕಾರಣ ಎಂದು ಹೇಳಿಕೊಳ್ಳಲು ಅವರು ಮುಂದೆ ಬರುತ್ತಿಲ್ಲ. ಬದಲಿಗೆ ಬಾಯಿಮುಚ್ಚಿಕೊಂಡು ಮನೆಯಲ್ಲಿ ಕುಳಿತಿದ್ದಾರೆ’ ಎಂದು ಮೋದಿ ಹೇಳಿದ್ದಾರೆ.
ಮೋದಿ ಅವರ ಈ ಆರೋಪಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಿರುಗೇಟು ನೀಡಿದ್ದಾರೆ. ‘ಈ ಕಾರ್ಯಾಚರಣೆಯಲ್ಲಿ ಬಿಜೆಪಿ ಎಡವಟ್ಟು ಮಾಡಿಕೊಂಡಿದೆ. ಸಮಾಜವಾದಿ ಪಕ್ಷದ ಪುಷ್ಪರಾಜ್ ಜೈನ್ ಬದಲಿಗೆ, ಬಿಜೆಪಿಯ ಪೀಯೂಷ್ ಜೈನ್ ಮನೆಯಲ್ಲಿ ಶೋಧಕಾರ್ಯ ನಡೆಸಲಾಗಿದೆ’ ಎಂದು ಅಖಿಲೇಶ್ ತಿರುಗೇಟು ನೀಡಿದ್ದಾರೆ.
‘ಈಗ ಬಂಧನದಲ್ಲಿರುವ ಪೀಯೂಷ್ ಜೈನ್ ಅವರ ಮೊಬೈಲ್ ಫೋನ್ ಕರೆಗಳ ವಿವರವನ್ನು ಬಹಿರಂಗಪಡಿಸುವ ಧೈರ್ಯವನ್ನು ಬಿಜೆಪಿ ಮಾಡಲಿ. ಅವರ ಜತೆ ಬಿಜೆಪಿಯ ಯಾರೆಲ್ಲಾ ನಾಯಕರು ಸಂಪರ್ಕದಲ್ಲಿದ್ದರು ಎಂಬುದು ಜನರಿಗೆ ಗೊತ್ತಾಗಲಿದೆ’ ಎಂದು ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ.
ನುಡಿ–ಕಿಡಿ
ನಾನು ಮೊದಲು ಕಾಂಗ್ರೆಸ್‌ನಲ್ಲಿಯೇ ಇದ್ದೆ. ಆದರೆ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಯಾವುದೇ ಆಸಕ್ತಿ ತೋರಿಸಲಿಲ್ಲ. ಹೀಗಾಗಿಯೇ ನಾನು ಕಾಂಗ್ರೆಸ್ ತೊರೆದು, ಟಿಎಂಸಿ ಸೇರಿದೆ
ಸುಶ್ಮಿತಾ ದೇವ್, ಟಿಎಂಸಿಯ ರಾಜ್ಯಸಭಾ ಸದಸ್ಯೆ
––––––––––
ಕಾಂಗ್ರೆಸ್ ಅನ್ನು ಹೊರತುಪಡಿಸಿ ಭಾರತವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುತ್ತೇವೆ ಎಂದು ಯಾರಾದರೂ ಭಾವಿಸಿದ್ದರೆ, ಅವರು ನಿಜಕ್ಕೂ ಮೂರ್ಖರ ಸ್ವರ್ಗದಲ್ಲಿ ಇದ್ದಾರೆ ಎಂದೇ ಅರ್ಥ
ಪ್ರದೀಪ್ ಭಟ್ಟಾಚಾರ್ಯ, ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ
–––––––
ಎಬಿಸಿಡಿಯೇ ಸಮಾಜವಾದಿ ಪಕ್ಷದ ಮಂತ್ರ. ಎ ಅಂದರೆ ಆತಂಕವಾದ, ಬಿ ಎಂದರೆ ಭಾಯಿ–ಬತೀಜಾವಾದ (ಸೋದರ ಸಂಬಂಧಿಗೆ ಮಣೆ), ಸಿ ಅಂದರೆ ಭ್ರಷ್ಟಾಚಾರ ಮತ್ತು ಡಿ ಅಂದರ ದಂಗೆ
ಅಮಿತ್ ಶಾ, ಕೇಂದ್ರ ಗೃಹ ಸಚಿವ
–––––––
ಹಾಥರಸ್, ಲಖಿಂಪುರ ಖೇರಿ, ಗೋರಖಪುರ ಮತ್ತು ಆಗ್ರಾ ಘಟನೆಗಳ ನಂತರ ಬಿಜೆಪಿ ಬೆಂಬಲಿಗರೇ ಆ ಪಕ್ಷದ ವಿರುದ್ಧ ಎಬಿಸಿಡಿ ಘೋಷಣೆ ಕೂಗುತ್ತಿದ್ದಾರೆ. ಎಬಿಸಿಡಿ ಅಂದರೆ, ಅಬ್ ಬಿಜೆಪಿ ಚೋಡ್ ದೊ (ಈಗ ಬಿಜೆಪಿಯನ್ನು ತೊರೆಯಿರಿ)
ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ
–––––––
‘ಬಿಜೆಪಿ ಆಮಿಷ’
ಚಂಡೀಗಡ: ‘ಚಂಡೀಗಡ ನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದಿರುವ ಎಎಪಿಯ ಸದಸ್ಯರನ್ನು ತನ್ನತ್ತ ಸೆಳೆದುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಎಎಪಿ ಮುಖಂಡ ರಾಘವ್ ಛಡ್ಡಾ ಆರೋಪಿಸಿದ್ದಾರೆ.
ಚಂಡೀಗಡ ನಗರ ಪಾಲಿಕೆ ಚುನಾವಣೆಯ ಫಲಿತಾಂಶವು ಸೋಮವಾರವಷ್ಟೇ ಪ್ರಕಟವಾಗಿದೆ. 35 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಎಪಿ 14 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ 12 ಸ್ಥಾನ, ಕಾಂಗ್ರೆಸ್ 8 ಸ್ಥಾನ ಮತ್ತು ಅಕಾಲಿ ದಳವು 1 ಸ್ಥಾನವನ್ನು ಗೆದ್ದುಕೊಂಡಿವೆ. ಮೇಯರ್ ಹುದ್ದೆಗೆ ಏರಲು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲ.
‘ನಮ್ಮ ಪಕ್ಷದ ಮೂವರು ಕೌನ್ಸಿಲರ್‌ಗಳನ್ನು ಖರೀದಿಸಲು ಬಿಜೆಪಿ ಯತ್ನಿಸಿದೆ. ಅವರಿಗೆ ಬಿಜೆಪಿ ನಾಯಕರು ಕರೆ ಮಾಡಿದ್ದಾರೆ. ಇಬ್ಬರಿಗೆ ತಲಾ ₹50 ಲಕ್ಷದ ಆಮಿಷ ಒಡ್ಡಲಾಗಿದೆ. ಮತ್ತೊಬ್ಬ ಕೌನ್ಸಿಲರ್‌ಗೆ ₹75 ಲಕ್ಷದ ಆಮಿಷ ಒಡ್ಡಲಾಗಿದೆ’ ಎಂದು ರಾಘವ್ ಛಡ್ಡಾ ಆರೋಪಿಸಿದ್ದಾರೆ.
ದಿನದ ಬೆಳವಣಿಗೆ
l ಪಂಜಾಬ್ ವಿಧಾನಸಭಾ ಚುನಾವಣೆಗೆ ಎಎಪಿ ತನ್ನ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. 15 ಅಭ್ಯರ್ಥಿಗಳ ಕ್ಷೇತ್ರಗಳನ್ನು ಎಎಪಿ ಮಂಗಳವಾರ ಅಂತಿಮಗೊಳಿಸಿದೆ. ಈ ಮೂಲಕ ಪಕ್ಷವು ಒಟ್ಟು 88 ಅಭ್ಯರ್ಥಿಗಳ ಹೆಸರು ಪ್ರಕಟಿಸಿದಂತಾಗಿದೆ
l ಪಂಜಾಬ್: ಮಾಜಿ ಕ್ರಿಕೆಟಿಗ ದಿನೇಶ್ ಮೊಂಗಿಯಾ ಅವರು ಮಂಗಳವಾರ ಬಿಜೆಪಿ ಸೇರಿದ್ದಾರೆ. ಪಂಜಾಬ್ ಕಾಂಗ್ರೆಸ್ ಶಾಸಕರಾದ ಫತೇ ಸಿಂಗ್ ಬಾಜ್ವಾ ಮತ್ತು ಬಲ್ವಿಂದರ್ ಸಿಂಗ್ ಲಡ್ಡಿ ಅವರು ಮಂಗಳವಾರ ಬಿಜೆಪಿ ಸೇರಿದ್ದಾರೆ
l ಗೋವಾದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಯೇ ಚುನಾವಣಾ ಕಣಕ್ಕೆ ಇಳಿಯುತ್ತೇವೆ ಎಂದು ಟಿಎಂಸಿ ಹೇಳಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.