ಶಿರಡಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೀಸಲಾತಿ ವಿರೋಧಿಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ದೇಶದಲ್ಲಿ ಜಾತಿ ಗಣತಿ ನಡೆಸಬೇಕೆಂದು ರಾಹುಲ್ ಬಯಸುತ್ತಾರೆ. ಆದ್ದರಿಂದಲೇ ಈ ನಾಯಕರು ರಾಹುಲ್ ಬಗ್ಗೆ ಭಯಭೀತಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ಅಹಲ್ಯಾನಗರದ ಶಿರಡಿಯಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸುಮಾರು ₹10 ಲಕ್ಷ ಕೋಟಿ ಮೌಲ್ಯದ ಯೋಜನೆಗಳನ್ನು ಮಹಾರಾಷ್ಟ್ರದಿಂದ ಕಿತ್ತುಕೊಳ್ಳಲಾಗಿದೆ. ನಮಗೆಲ್ಲ ಮಹಾರಾಷ್ಟ್ರದ ಬಗ್ಗೆ ಹೆಮ್ಮೆ ಇದೆ. ಆದರೆ ಈ ನೆಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸಲಾಗುತ್ತಿದೆ. ನಿಮಗೆ ಅವಮಾನ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಶಿವಾಜಿ ಮಹಾರಾಜರ ಹೆಸರನ್ನು ಬಳಕೆ ಮಾಡುತ್ತಾರೆ. ಆದರೆ ಅವರನ್ನು ಗೌರವಿಸುವುದಿಲ್ಲ‘ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
ನನ್ನ ಸಹೋದರ ಮೀಸಲಾತಿ ವಿರೋಧಿ ಎಂದು ಬಿಜೆಪಿ ನಾಯಕರು ಸಾರ್ವಜನಿಕ ವೇದಿಕೆಗಳಲ್ಲಿ ಸುಳ್ಳು ಹೇಳುತ್ತಿದ್ದಾರೆ. ಆದರೆ, ರಾಹುಲ್ ಗಾಂಧಿ ನ್ಯಾಯಕ್ಕಾಗಿ ಮತ್ತು ಜಾತಿ ಗಣತಿಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದರು. ಮಣಿಪುರದಿಂದ ಮುಂಬೈವರೆಗೆ ನ್ಯಾಯ ಯಾತ್ರೆ ನಡೆಸಿದ್ದರು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.