ವಿಯನ್‌ಟಿಯಾನ್, ಲಾವೊಸ್: ಭಾರತ ಮತ್ತು ಆಸಿಯಾನ್ ಶೃಂಗದ ರಾಷ್ಟ್ರಗಳ ನಡುವೆ ಸಮಗ್ರ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ 10 ಅಂಶಗಳ ಕಾರ್ಯಕ್ರಮವನ್ನು ಪ್ರಕಟಿಸಿದರು.
ಇಲ್ಲಿ ನಡೆದ ‘21ನೇ ಭಾರತ –ಆಸಿಯಾನ್’ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಏಷ್ಯಾ ವಲಯದ ಭವಿಷ್ಯದ ದಿಕ್ಸೂಚಿಯಾಗಿ ಪ್ರಾದೇಶಿಕವಾಗಿ ರಾಷ್ಟ್ರಗಳು ಒಟ್ಟುಗೂಡುವುದು ನಿರ್ಣಾಯಕವಾದುದು’ ಎಂದು ಪ್ರತಿಪಾದಿಸಿದರು.
‘ಕಳೆದೊಂದು ದಶಕದಲ್ಲಿ ಭಾರತ– ಆಸಿಯಾನ್ ರಾಷ್ಟ್ರಗಳ ವಾಣಿಜ್ಯ ವಹಿವಾಟು ದುಪ್ಪಟ್ಟಾಗಿದೆ. 130 ಬಿಲಿಯನ್ ಡಾಲರ್‌ಗೂ ಅಧಿಕವಾಗಿದೆ. ಹೆಚ್ಚಿನ ಆರ್ಥಿಕ ವಹಿವಾಟಿಗೆ ಪೂರಕವಾಗಿ ಸರಕುಗಳ ವಾಣಿಜ್ಯ ಒಪ್ಪಂದ ಪರಿಶೀಲಿಸಲಾಗುವುದು’ ಎಂದು ಹೇಳಿದರು.
‘21ನೇ ಶತಮಾನವು ‘ಆಸಿಯಾನ್ ಶತಮಾನ’ವಾಗಿದೆ. ಇದು, ಭಾರತ–ಆಸಿಯಾನ್ ಸದಸ್ಯ ರಾಷ್ಟ್ರಗಳ ಶತಮಾನವಾಗಿದೆ’ ಎಂದೂ ಅವರು ಹೇಳಿದರು.
ಮಲೇಷ್ಯಾ, ಥಾಯ್ಲೆಂಡ್, ಬ್ರೂನಿಯೆ, ಕಾಂಬೊಡಿಯಾ, ಇಂಡೊನೇಷ್ಯಾ, ಮ್ಯಾನ್ಮಾರ್, ಫಿಲಿಪ್ಪೀನ್ಸ್, ವಿಯೆಟ್ನಾಂ, ಲಾವೊಸ್ ಮತ್ತು ಸಿಂಗಪುರ –ಆಸಿಯಾನ್ ಶೃಂಗದ ಸದಸ್ಯ ರಾಷ್ಟ್ರಗಳಾಗಿವೆ.
ಭಾರತವು ಪೂರ್ವ ಕೇಂದ್ರಿತ ನೀತಿಯ (ಆ್ಯಕ್ಟ್ ಈಸ್ಟ್ ಪಾಲಿಸಿ) 10ನೇ ವರ್ಷಾಚರಣೆಯಲ್ಲಿದೆ. ಈ ನೀತಿಯು ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ನಡುವಿನ ಐತಿಹಾಸಿಕ ಬಾಂಧವ್ಯಕ್ಕೆ ಹೊಸ ಉತ್ಸಾಹ, ದಿಕ್ಸೂಚಿ, ಹೊಸ ಆವೇಗವನ್ನು ನೀಡಿದೆ ಎಂದರು.
‘ಭಾರತ–ಆಸಿಯಾನ್ ಶೃಂಗಸಭೆಯು ಫಲಪ್ರದವಾಗಿದೆ. ಸಾಂಸ್ಕೃತಿಕ ಬಾಂಧವ್ಯ, ವಾಣಿಜ್ಯ ಒಪ್ಪಂದ, ಸಹಕಾರ ಮತ್ತು ತಂತ್ರಜ್ಞಾನ ಸಂಪರ್ಕ ಪಾಲುದಾರಿಕೆಯನ್ನು ದೃಢಪಡಿಸಲು ಹಾಗೂ ಸಮಗ್ರವಾಗಿ ಮುನ್ನಡೆಸಲು ವಿಸ್ತೃತವಾಗಿ ಚರ್ಚಿಸಿದ್ದೇವೆ’ ಎಂದು ಪ್ರಧಾನಿ ಈ ಕುರಿತು ‘ಎಕ್ಸ್’ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
2025ರಲ್ಲಿ ಭಾರತ– ಆಸಿಯಾನ್ ರಾಷ್ಟ್ರಗಳ ಪ್ರವಾಸೋದ್ಯಮ ವರ್ಷಾಚರಣೆ
ನಳಂದ ವಿಶ್ವವಿದ್ಯಾಲಯದಲ್ಲಿ ಸ್ಕಾಲರ್‌ಶಿಪ್‌ಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವುದು
ಆಸಿಯಾನ್ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಭಾರತದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಅನುದಾನ ಒದಗಿಸುವುದು
ಯುವಶೃಂಗ, ಸ್ಟಾರ್ಟ್‌ಅಪ್ ಉತ್ಸವ, ಹ್ಯಾಕಥಾನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ‘ಪೂರ್ವ ಕೇಂದ್ರಿತ ನೀತಿ’ಯ ದಶಕದ ಆಚರಣೆ
ಭಾರತ –ಆಸಿಯಾನ್ ಮಹಿಳಾ ವಿಜ್ಞಾನಿಗಳ ಸಮಾವೇಶ ಆಯೋಜನೆ
ವಿಕೋಪ ನಿರ್ವಹಣೆ ಕಾರ್ಯಗಳಿಗೆ ಒತ್ತು ನೀಡಲು ₹42 ಕೋಟಿ ನೆರವು
ಆರೋಗ್ಯ ಕ್ಷೇತ್ರದಲ್ಲಿ ಸ್ಥಿತಿಸ್ಥಾಪಕತ್ವಕ್ಕಾಗಿ ಆರೋಗ್ಯ ಸಚಿವರ ಸಂಪರ್ಕ ಜಾಲ ರಚನೆ
ಡಿಜಿಟಲ್ ಮತ್ತು ಸೈಬರ್ ಬೆದರಿಕೆ ಎದುರಿಸಲು ಆಸಿಯಾನ್–ಭಾರತ ಸೈಬರ್ ನೀತಿಯ ನಿಯಮಿತ ಪರಿಶೀಲನೆ
ಹವಾಮಾನ ವೈಪರೀತ್ಯ ಎದುರಿಸಿ, ಹವಾಮಾನ ಸ್ಥಿತಿಸ್ಥಾಪಕತ್ವ ಗುರಿ ಸಾಧನೆಗೆ ‘ಫ್ಲ್ಯಾಂಟ್ ಎ ಟ್ರೀ’ ಅಭಿಯಾನಕ್ಕೆ ಕೈಜೋಡಿಸಲು ಆಸಿಯಾನ್ ನಾಯಕರಿಗೆ ಆಹ್ವಾನ
ಆಸಿಯಾನ್–ಭಾರತ ಸಂವಹನಕ್ಕಾಗಿ ಚಿಂತಕರ ಚಾವಡಿಯ ಸಂಪರ್ಕ ಜಾಲ
‘ಲಾವೊ ರಾಮಾಯಣ’ ವೀಕ್ಷಿಸಿದ ಪ್ರಧಾನಿ ಮೋದಿ
ವಿಯನ್‌ಟಿಯಾನ್: ಲಾವೊಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ, ಉಭಯ ದೇಶಗಳ ನಡುವಣ ಪಾರಂಪರಿಕ ಮತ್ತು ನಾಗರಿಕ ಬಾಂಧವ್ಯದ ಪ್ರತೀಕ ಎನ್ನಲಾದ ‘ರಾಮಾಯಣ’ದ ಲಾವೊಂಟಿಯಾನ್ ಆವೃತ್ತಿಯನ್ನು ವೀಕ್ಷಿಸಿದರು.
ಲಾವೊಸ್‌ನ ರಾಜಧಾನಿಯಲ್ಲಿ ನಡೆಯಲಿರುವ ಅಸಿಯಾನ್–ಭಾರತ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಇಲ್ಲಿಗೆ ಆಗಮಿಸಿದ್ದಾರೆ.
ಫಲಕ್ ಫಲಂ ಎಂದು ಹೆಸರಿಸಲಾದ ‘ಲಾವೊ ರಾಮಾಯಣ’ ಭಾಗದ ಪ್ರದರ್ಶನವನ್ನು ಅವರು ವೀಕ್ಷಿಸಿದರು. ಲುಅಂಗ್ ಪ್ರಬಂಗ್‌ನ ಹೆಸರಾಂತ ರಾಯಲ್ ರಂಗತಂಡವು ಈ ಸಂಚಿಕೆಯನ್ನು ಪ್ರಸ್ತುತಪಡಿಸಿತು.
ಸಂಸ್ಥೆಯ ವೆಬ್‌ಸೈಟ್‌ನ ಮಾಹಿತಿ ಅನುಸಾರ, ಲಾವೊ ರಾಮಾಯಣ ಆವೃತ್ತಿಯು ಭಾರತದ ಮೂಲ ಆವೃತ್ತಿಗಿಂತಲೂ ಭಿನ್ನವಾಗಿದೆ. ಬೌದ್ಧ ಮಿಷನರಿಗಳು 16ನೇ ಶತಮಾನದಲ್ಲಿ ಇಲ್ಲಿ ಪರಿಚಯಿಸಿದರು.
ಇದಕ್ಕೂ ಮೊದಲು ಪ್ರಧಾನಿಯವರು ಲಾವೊ ಪಿಡಿಆರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅಲ್ಲಿ ಹಲವು ಹಿರಿಯ ಬೌದ್ಧ ಭಿಕ್ಕುಗಳು ಪ್ರಧಾನಿಯವರಿಗೆ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ ಹಲವು ಪ್ರಮುಖರು ಭಾಗವಹಿಸಿದ್ದರು.
‘ಸಾಂಸ್ಕೃತಿಕ ಬಾಂಧವ್ಯದ ಕೊಂಡಿ ಬೇರೂರಿದೆ. ಪಾರಂಪರಿಕವಾದ ಹಲವು ತಾಣಗಳನ್ನು ಸಂರಕ್ಷಿಸಲು ಲಾವೊ ಪಿಡಿಆರ್ ಜೊತೆಗೂಡಿ ಕಾರ್ಯನಿರ್ವಹಿಸಲು ಭಾರತಕ್ಕೆ ಹೆಮ್ಮೆಎನಿಸಲಿದೆ‘ ಎಂದು ಮೋದಿ ಅವರು ಎಕ್ಸ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.