ADVERTISEMENT

ಪ್ರಧಾನಿ ಬುಡಕಟ್ಟು ವಿರೋಧಿ– AAP,JMM ಮುಗಿಸಲು ಸಂಚು ರೂಪಿಸಿದ್ದಾರೆ: ಕೇಜ್ರಿವಾಲ್

ಪಿಟಿಐ
Published 21 ಮೇ 2024, 13:47 IST
Last Updated 21 ಮೇ 2024, 13:47 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

(ಪಿಟಿಐ ಚಿತ್ರ)

ಜಮ್‌ಶೆಡ್‌ಪುರ (ಜಾರ್ಖಂಡ್): ಪ್ರಧಾನಿ ನರೇಂದ್ರ ಮೋದಿ ಅವರು ಬುಡಕಟ್ಟು ಜನಾಂಗದ ವಿರೋಧಿ. ದೇಶದ ಪ್ರಬಲ ಬುಡಕಟ್ಟು ನಾಯಕನನ್ನು ಕಂಬಿ ಹಿಂದೆ ಹಾಕಿದ್ದಾರೆ. ಅಲ್ಲದೇ ಎಎಪಿ ಹಾಗೂ ಜೆಎಂಎಂ ಸರ್ಕಾರಗಳನ್ನು ಉರುಳಿಸಲು ಸಂಚು ರೂಪಿಸಿದ್ದಾರೆ ಎಂದು ‌ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.

ADVERTISEMENT

‌ಮಂಗಳವಾರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಗವಾನ್ ಜಗನ್ನಾಥ ಮೋದಿಯ ಭಕ್ತ ಎಂದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇವರ ದುರಹಂಕಾರವನ್ನು ಹತ್ತಿಕ್ಕಬೇಕು ಎಂದು ಜನರನ್ನು ಒತ್ತಾಯಿಸಿದರು.

ಪ್ರಧಾನಿ ಮೋದಿ ಎಎಪಿ ಮತ್ತು ಜೆಎಂಎಂ ಅನ್ನು ಮುಗಿಸಲು ಸಂಚು ರೂಪಿಸಿದರು. ಆದರೆ ನಾವು ಬಲಶಾಲಿಯಾಗಿದ್ದೇವೆ. ಇದರಿಂದ ಅವರಿಗೆ ದೆಹಲಿ, ಪಂಜಾಬ್, ಜಾರ್ಖಂಡ್ ಸರ್ಕಾರಗಳನ್ನು ಉರುಳಿಸಲು ಸಾಧ್ಯವಾಗಲಿಲ್ಲ ಎಂದರು.

ನನ್ನನ್ನು ಜೈಲಿನಲ್ಲಿಡಲು ಪ್ರಧಾನಿ ಮೋದಿ ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ ನಾನು ಭಜರಂಗಬಲಿಯ ಭಕ್ತ. ಪವಾಡ ಸಂಭವಿಸಿದೆ. ಮಧ್ಯಂತರ ಜಾಮೀನಿನ ಮೇಲೆ ನಾನು ಹೊರಬಂದೆ. ಶೀಘ್ರದಲ್ಲೇ ಹೇಮಂತ್ ಸೊರೇನ್ ಕೂಡ ಜೈಲಿನಿಂದ ಹೊರಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿಗೆ ಸವಾಲು ಹಾಕುತ್ತಿರುವ ಸೊರೇನ್ ಅವರ ಪತ್ನಿ ಕಲ್ಪನಾ ಅವರು ಝಾನ್ಸಿಯ ರಾಣಿಯಂತೆ ಧೀರವಂತೆ. ಯಾವುದೇ ನ್ಯಾಯಾಲಯವು ಹೇಮಂತ್ ಸೊರೇನ್‌ ಮತ್ತು ಅರವಿಂದ ಕೇಜ್ರಿವಾಲ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿಲ್ಲ. ಇದು ಪ್ರಧಾನಿ ಮೋದಿಯ ಗೂಂಡಾಗಿರಿ ಎಂದು ಕೇಜ್ರಿವಾಲ್ ಆರೋಪಿಸಿದರು.

ಪ್ರಧಾನಿ ಅವರು ಬುಡಕಟ್ಟು ಜನಾಂಗದವರನ್ನು ದ್ವೇಷಿಸುತ್ತಾರೆ. ಹಾಗಾಗಿ ಬಿಜೆಪಿಗೆ ಮತ ಹಾಕಬೇಡಿ. ಬಿಜೆಪಿಗೆ ಮತ ನೀಡಿದರೆ ಸೊರೇನ್‌ ಜೈಲಿನಲ್ಲಿಯೇ ಉಳಿಯುತ್ತಾರೆ. ಇದರಿಂದ ಜಾರ್ಖಂಡ್ ಮತ್ತು ಬುಡಕಟ್ಟು ಜನಾಂಗದವರಿಗೆ ದ್ರೋಹ ಬಗೆದಂತಾಗುತ್ತದೆ ಎಂದರು.

ಪ್ರಧಾನಿ ಮೋದಿ ಅವರನ್ನು ತೆಗೆದುಹಾಕಿ, ರಾಷ್ಟ್ರವನ್ನು ಉಳಿಸಿ. ಏಕೆಂದರೆ ಮೋದಿ ಮತ್ತೆ ಆಯ್ಕೆಯಾದರೆ ಮೀಸಲಾತಿ ಮತ್ತು ಸಂವಿಧಾನ ನಾಶವಾಗುತ್ತವೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.