ನವದೆಹಲಿ (ಪಿಟಿಐ): ‘ರಾಜ್ಯಗಳಲ್ಲಿ ಔದ್ಯಮಿಕ ವಾತಾವರಣ ಉತ್ತೇಜಿಸಲು ಒತ್ತು ನೀಡಬೇಕು. ಗತಿಶಕ್ತಿ, ಹರ್ ಘರ್ ಜಲ್‌ನಂತಹ ಪ್ರಮುಖ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶ್ರಮಿಸಬೇಕು’ ಎಂದು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದರು.
18 ರಾಜ್ಯಗಳ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಜೊತೆ ಭಾನುವಾರ ಸುಮಾರು 4 ಗಂಟೆ ಸಭೆ ನಡೆಸಿದ ಅವರು ಹಲವು ವಿಚಾರಗಳ ಕುರಿತು ಚರ್ಚಿಸಿದರು.
‘ಔದ್ಯಮಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಹಲವು ಉಪಕ್ರಮಗಳ ಕುರಿತು ಮಾಹಿತಿ ನೀಡಿದ ಅವರು ಉದ್ಯಮಶೀಲತೆಯ ಮಹತ್ವವನ್ನೂ ಮನವರಿಕೆ ಮಾಡಿಕೊಟ್ಟರು’ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.
ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕು. ಅದಕ್ಕೆ ಅಗತ್ಯವಿರುವ ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಆ ಮೂಲಕ ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವಂತೆ ಮಾಡಬೇಕು ಎಂದೂ ಸಲಹೆ ನೀಡಿದ್ದಾಗಿ ಪ್ರಕಟಣೆ ವಿವರಿಸಿದೆ.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ,ಕೇಂದ್ರ ಸಚಿವರಾದ ಭೂಪೇಂದರ್ ಯಾದವ್ ಮತ್ತು ವಿನಯ್ ಸಹಸ್ರಬುದ್ಧೆ ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.