ನವದೆಹಲಿ: ಮೊದಲ ಬಾರಿಯ ಮತದಾರರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವ ಸಮೂಹಕ್ಕೆ ಭಾನುವಾರ ಮನವಿ ಮಾಡಿಕೊಂಡರು.
‘ಮನದ ಮಾತು’ ರೇಡಿಯೊ ಕಾರ್ಯಕ್ರಮದ 110ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ‘18ನೇ ಲೋಕಸಭಾ ಚುನಾವಣೆಯು ಯುವ ಜನರ ಆಶೋತ್ತರಗಳ ಪ್ರತೀಕ ಎನಿಸಿದೆ. ನಿಮ್ಮ ಮೊದಲ ಮತ ಈ ದೇಶಕ್ಕಾಗಿ ಆಗಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಿ’ ಎಂದು ಕರೆ ನೀಡಿದರು.
ಯುವ ಜನರು ತಮ್ಮನ್ನು ಮತದಾನ ಪ್ರಕ್ರಿಯೆಗೆ ಮಾತ್ರ ಸೀಮಿತಗೊಳಿಸದೆ, ಚುನಾವಣಾ ಚಟುವಟಿಕೆಗೆ ಸಂಬಂಧಿಸಿದ ಸಂವಾದ ಮತ್ತು ಚರ್ಚೆಗಳ ಬಗ್ಗೆಯೂ ಅರಿವು ಹೊಂದಬೇಕು ಎಂದು ಸಲಹೆ ನೀಡಿದರು.
ಚುನಾವಣೆಯ ನೀತಿ ಸಂಹಿತೆ ಜಾರಿಯಾಗಲಿರುವ ಕಾರಣ ಮುಂದಿನ ಮೂರು ತಿಂಗಳು ‘ಮನದ ಮಾತು’ ಪ್ರಸಾರವಾಗುವುದಿಲ್ಲ ಎಂದು ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.
‘ಈ ಕಾರ್ಯಕ್ರಮದ 110 ಸಂಚಿಕೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಮುಂದಿನ ಬಾರಿ ನಾವು 111ನೇ ಸಂಚಿಕೆಯಲ್ಲಿ ಭೇಟಿಯಾಗೋಣ’ ಎನ್ನುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದರು. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಈ ಕಾರ್ಯಕ್ರಮ ಕೆಲವು ತಿಂಗಳು ಮೊಟಕುಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.