ರಾಂಚಿ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷಗಳ ವಿರುದ್ಧ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಚುನಾಯಿತ ಸರ್ಕಾರಗಳನ್ನು ಉರುಳಿಸಲು ಶಾಸಕರನ್ನು ಮೇಕೆಗಳ ರೀತಿ ಖರೀದಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಸರ್ಕಾರವನ್ನು ಅದಾನಿ ಮತ್ತು ಅಂಬಾನಿ ಜೊತೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕುರಿ ರೂಪದ ತೋಳ ಎಂದು ಕರೆದಿದ್ದಾರೆ.
ಮೋದಿ ಮತ್ತು ಶಾ, ಇಡಿ, ಸಿಬಿಐ ಮತ್ತು ಇತರೆ ಕೇಂದ್ರದ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳ ನಾಯಕರ ವಿರುದ್ಧ ಬಳಸುತ್ತಿದ್ದಾರೆ ಎಂದ ಅವರು, ನಾವು ಅದಕ್ಕೆಲ್ಲ ಹೆದರುವುದಿಲ್ಲ. ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ ಎಂದಿದ್ದಾರೆ.
‘ಮೋದಿ, ಶಾ, ಅಂಬಾನಿ ಮತ್ತು ಅದಾನಿ ದೇಶವನ್ನು ನಡೆಸುತ್ತಿದ್ದಾರೆ. ನಾನು ಮತ್ತು ರಾಹುಲ್ ಗಾಂಧಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಡುತ್ತಿದ್ದೇವೆ’ಎಂದು ಖರ್ಗೆ ಹೇಳಿದ್ದಾರೆ.
ನಾನು ಜೈವಿಕವಾಗಿ ಜನಿಸಿದವನಲ್ಲ ಎಂದು ಮೋದಿ ಹೇಳಿಕೊಳ್ಳುವ ಕುರಿತಂತೆ ಪ್ರತಿಕ್ರಿಯಿಸಿದ ಖರ್ಗೆ, ಮೋದಿ ಒಬ್ಬ ಹುಟ್ಟ ಸುಳ್ಳುಕೋರ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಗುಜರಾತ್‌ಗೆ ಸುವರ್ಣಯುಗ ಬಂದಿತೇ? ಎಂದು ಪ್ರಶ್ನಿಸಿದ್ದಾರೆ.
‘ಮೋದಿಯವರನ್ನು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ 25 ವರ್ಷಗಳಿಂದ ಸಹಿಸಿಕೊಂಡಿದ್ದೇವೆ. ಹಿಂದುಳಿದ ವರ್ಗ ಮತ್ತು ಮಹಿಳೆಯರನ್ನು ಪೀಡಿಸುವವರನ್ನು ಮೋದಿ ಬೆಂಬಲಿಸುತ್ತಾರೆ. ಮೋದಿ ಮಣಿಪುರಕ್ಕೆ ಹೋಗಲು ಹೆದರುತ್ತಾರೆ. ಅಲ್ಲಿಗೆ ಹೋಗುವಂತೆ ನಾನು ಅವರಿಗೆ ಸವಾಲು ಹಾಕಿದ್ದೆ’ಎಂದು ಖರ್ಗೆ ಹೇಳಿದ್ದಾರೆ.
ಉತ್ತರಪ್ರದೇಶದ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ನಿಜವಾದ ಯೋಗಿ ‘ಬಟೆಂಗೆ ತೋ ಕಟೆಂಗೆ’ಯಂತಹ ಭಾಷೆಯನ್ನು ಬಳಸುವುದಿಲ್ಲ. ಈ ಭಾಷೆಯನ್ನು ಭಯೋತ್ಪಾದಕರು ಬಳಸುತ್ತಾರೆ. ಯೋಗಿ ಮಠದ ಮುಖ್ಯಸ್ಥರು, ಕೇಸರಿ ವಸ್ತ್ರಗಳನ್ನು ಧರಿಸುತ್ತಾರೆ, ಆದರೆ 'ಮುಖ್ ಮೇ ರಾಮ್ ಬಗಲ್ ಮೆ ಚೂರಿ'('ಬಾಯಲ್ಲಿ ರಾಮ, ಕಂಕುಳಲ್ಲಿ ಚಾಕು') ಎಂಬುದರಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದರು.
ರಾಜೀವ್ ಗಾಂಧಿ ಹಂತಕರಲ್ಲಿ ಒಬ್ಬನನ್ನು ಸೋನಿಯಾ ಗಾಂಧಿ ಕ್ಷಮಿಸಿದ್ದರು. ಪ್ರಿಯಾಂಕಾ ಗಾಂಧಿ ಕೊಲೆಗಾರನನ್ನು ಅಪ್ಪಿಕೊಂಡಿದ್ದರು. ಇದು ಸಹಾನುಭೂತಿ ಎಂದು ಖರ್ಗೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.