ADVERTISEMENT

ಗ್ರಾಮಗಳ ವಿಚಾರದಲ್ಲಿ ಕಾಂಗ್ರೆಸ್‌ ಮಲತಾಯಿ ಧೋರಣೆ ಅನುಸರಿಸಿತ್ತು: ಪ್ರಧಾನಿ ಮೋದಿ ಆರೋಪ

ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನದ ಅಂಗವಾಗಿ ಪ್ರಧಾನಿ ಭಾಷಣ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2023, 14:16 IST
Last Updated 24 ಏಪ್ರಿಲ್ 2023, 14:16 IST
ಮಧ್ಯಪ್ರದೇಶದ ರೀವಾದಲ್ಲಿ ಸೋಮವಾರ ನಡೆದ ಪಂಚಾಯತ್‌ ರಾಜ್‌ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿದರು –
ಮಧ್ಯಪ್ರದೇಶದ ರೀವಾದಲ್ಲಿ ಸೋಮವಾರ ನಡೆದ ಪಂಚಾಯತ್‌ ರಾಜ್‌ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿದರು –   ಪಿಟಿಐ

ರೀವಾ: ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರಗಳು ಗ್ರಾಮಗಳ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸಿದ್ದವು ಮತ್ತು  ಸರ್ಕಾರದ ಮೇಲೆ ಗ್ರಾಮದವರು ಇರಿಸಿದ್ದ ನಂಬಿಕೆಯನ್ನು ನುಚ್ಚುನೂರು ಮಾಡಿದವು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ರೀವಾದಲ್ಲಿ ಟೀಕಿಸಿದರು.

ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಬಿಜೆಪಿ ನೇತೃತ್ವದ ಸರ್ಕಾರವು ಗ್ರಾಮಗಳ ಪರಿಸ್ಥಿತಿಯನ್ನು ಸಾಕಷ್ಟು ಬದಲಿಸಿತು. ಪಂಚಾಯತಿಗಳಿಗೆ ಸಾಕಷ್ಟು ಅನುದಾನ ನೀಡಿತು. ಜನತೆ, ಶಾಲೆಗಳು, ರಸ್ತೆಗಳು, ವಿದ್ಯುತ್‌, ಶೇಖರಣಾ ವ್ಯವಸ್ಥೆ, ಗ್ರಾಮಗಳ ಆರ್ಥಿಕತೆಯಂಥ ವಿಚಾರಗಳು ಕಾಂಗ್ರೆಸ್‌ ಸರ್ಕಾರಗಳ ಅವಧಿಯಲ್ಲಿ ಆದ್ಯತಾ ಪಟ್ಟಿಯಲ್ಲಿ ಕಡೇ ಸ್ಥಾನಗಳನ್ನು ಹೊಂದಿದ್ದವು. ಗ್ರಾಮಗಳು ಮತ ಬ್ಯಾಂಕ್‌ ಆಗಿಲ್ಲದ ಕಾರಣ ಗ್ರಾಮಗಳಿಗೆ ಹಣ ವ್ಯಯಿಸುವುದನ್ನು ಕಾಂಗ್ರೆಸ್‌ ಸರ್ಕಾರಗಳು ಕಡೆಗಣಿಸಿದ್ದವು’ ಎಂದು ಹೇಳಿದರು. 

ಪಂಚಾಯತ್‌ ರಾಜ್‌ ದಿನದ ಅಂಗವಾಗಿ ಜನರಿಗೆ ಶುಭ ಅವರು ಹಾರೈಸಿದರು. ದೇಶದಾದ್ಯಂತ ಸುಮಾರು 30 ಲಕ್ಷ ಪಂಚಾಯತ್‌ ಪ್ರತಿನಿಧಿಗಳು ವರ್ಚುವಲ್‌ ಆಗಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. 

ADVERTISEMENT

ಗ್ರಾಮಸ್ಥರನ್ನು ಒಡೆಯುವ ತಮ್ಮ ವ್ಯವಹಾರಗಳನ್ನು ಮೂಲಕ ಹಲವಾರು ಸರ್ಕಾರಗಳು ನಡೆಸುತ್ತಿದ್ದವು. ಈ ಅನ್ಯಾಯಕ್ಕೆ ಬಿಜೆಪಿ ಕಡಿವಾಣ ಹಾಕಿತು ಎಂದರು.

2014ಕ್ಕೂ ಮೊದಲ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಹಾಯದಿಂದ ಸುಮಾರು, 6,000 ಪಂಚಾಯತಿ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ 8 ವರ್ಷಗಳಲ್ಲಿ ಸುಮಾರು 30,000 ಪಂಚಾಯತಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಪಂಚಾಯಿತಿಗಳ ಸಬಲೀಕರಣ ವಿಚಾರವನ್ನು ಬಿಜೆಪಿ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿತು. ಈಗ ಅದರ ಫಲಿತಾಂಶ ಸ್ಪಷ್ಟವಾಗಿ ಕಾಣುತ್ತಿದೆ ಎಂದರು.

ಡಿಜಿಟಲ್‌ ಕ್ರಾಂತಿಯ ಈ ಯುಗದಲ್ಲಿ ಪಂಚಾಯತಿಗಳನ್ನೂ ಡಿಜಿಟಲೀಕರಿಸಲಾಗಿದೆ. ಇ– ಗ್ರಾಮ್‌ಸ್ವರಾಜ್‌–ಜೆಇಎಂ(ಸರ್ಕಾರದ ಇ–ಮಾರುಕಟ್ಟೆ ತಾಣ) ವೆಬ್‌ ಪೋರ್ಟಲ್‌ಗೆ ಚಾಲನೆ ನೀಡಲಾಗಿದೆ. ಇದು ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ಸಂಗ್ರಹಣೆ ಪ್ರಕ್ರಿಯೆಯನ್ನು ಸರಳ ಮತ್ತು ಪಾರದರ್ಶಕಗೊಳಿಸುತ್ತದೆ. ಗ್ರಾಮಗಳ ಮನೆಗಳಿಗೆ ಸಂಬಂಧಿಸಿದ ಆಸ್ತಿ ಪತ್ರಗಳ ಕುರಿತು ಸಾಕಷ್ಟು ಗೊಂದಲಗಳಿರುತ್ತವೆ. ಈ ಗೊಂದಲಗಳು ‘ಪಿಎಂ ಸ್ವಾಮಿತ್ವ ಯೋಜನೆ’ಯಿಂದ ನಿವಾರಣೆಯಾಗಲಿವೆ ಎಂದರು.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.