ADVERTISEMENT

ಆಹಾರ ಭದ್ರತೆ ಸಾಧಿಸಲು ಸಾಮೂಹಿಕ ಕ್ರಮ ಅಗತ್ಯ: ಜಿ20 ಕೃಷಿ ಸಚಿವರ ಸಭೆಯಲ್ಲಿ ಮೋದಿ

ಪಿಟಿಐ
Published 16 ಜೂನ್ 2023, 7:41 IST
Last Updated 16 ಜೂನ್ 2023, 7:41 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಹೈದರಾಬಾದ್‌: ಕೃಷಿ ಕ್ಷೇತ್ರವು ಜಾಗತಿಕವಾಗಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಜಾಗತಿಕ ಆಹಾರ ಭದ್ರತೆಯನ್ನು ಸಾಧಿಸಲು ಸಾಮೂಹಿಕ ಕ್ರಮವನ್ನು ಹೇಗೆ ಕೈಗೊಳ್ಳಬೇಕು ಎಂಬುದರ ಕುರಿತು ಜಿ20 ಕೃಷಿ ಸಚಿವರ ಸಭೆಯಲ್ಲಿ ಚರ್ಚಿಸಲು ಶುಕ್ರವಾರ ಒತ್ತಾಯಿಸಿದರು.

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಜಿ20 ಕೃಷಿ ಸಚಿವರ ಮೂರು ದಿನಗಳ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿದರು. ಹವಾಮಾನ ಬದಲಾವಣೆಯು ವೈಪರೀತ್ಯಗಳನ್ನು ಉಂಟುಮಾಡುತ್ತಿದೆ. ಈ ಸವಾಲುಗಳನ್ನು ದಕ್ಷಿಣದ ರಾಷ್ಟ್ರಗಳು ಹೆಚ್ಚಾಗಿ ಅನುಭವಿಸುತ್ತಿವೆ ಎಂದು ಹೇಳಿದರು.

‘ಕೃಷಿಯು ಜಾಗತಿಕವಾಗಿ 2.5 ಶತಕೋಟಿ ಜನರಿಗೆ ಜೀವನೋಪಾಯವನ್ನು ಒದಗಿಸುತ್ತದೆ. ದಕ್ಷಿಣ ರಾಷ್ಟ್ರಗಳಲ್ಲಿ ಕೃಷಿಯ ಪಾಲು ಜಿಡಿಪಿಯ ಸುಮಾರು ಶೇ 30ರಷ್ಟಾಗಿದೆ. ಶೇ 60 ಕ್ಕಿಂತ ಹೆಚ್ಚು ಉದ್ಯೋಗಗಳನ್ನು ಕೃಷಿ ಒದಗಿಸುತ್ತದೆ. ಇಂದು ಈ ವಲಯವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಕೋವಿಡ್‌ ಸಾಂಕ್ರಿಮಿಕದಿಂದಾಗಿ ಪೂರೈಕೆ ಸರಪಳಿಯಲ್ಲಿ ಅಡಚಣೆ ಉಂಟಾಗಿದ್ದೂ ಅಲ್ಲದೇ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಪ್ರಭಾವದಿಂದ ಹದಗೆಟ್ಟಿದೆ’ ಎಂದು ಪ್ರಧಾನಮಂತ್ರಿ ಹೇಳಿದರು.

ADVERTISEMENT

ದೇಶವು ನೈಸರ್ಗಿಕ ಮತ್ತು ತಂತ್ರಜ್ಞಾನವನ್ನು ಒಳಗೊಂಡ ಕೃಷಿಯನ್ನು ಉತ್ತೇಜಿಸುತ್ತಿದೆ. ಆದರೂ, ಕೃಷಿಯಲ್ಲಿ ‘ಮೂಲಕ್ಕೆ ಹಿಂದಿರುಗಿ, ಭವಿಷ್ಯದತ್ತ ಮುನ್ನಡೆಯುವುದೇ’ ಭಾರತದ ನೀತಿಯಾಗಿದೆ ಎಂದು ಅವರು ಹೇಳಿದರು.

ಭೂಮಿ ತಾಯಿಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸಿಂಥೆಟಿಕ್ ಗೊಬ್ಬರ ಅಥವಾ ಕೀಟನಾಶಕಗಳನ್ನು ಬಳಸದೆ ದೇಶದಾದ್ಯಂತ ರೈತರು ನೈಸರ್ಗಿಕ ಕೃಷಿಯನ್ನು ಕೈಗೊಳ್ಳುತ್ತಿದ್ದಾರೆ ಎಂದು ಮೋದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.