ADVERTISEMENT

ಕೇಂದ್ರ ಸಂಪುಟಕ್ಕೆ ಭಾರಿ ಸರ್ಜರಿ: 36 ಮಂದಿ ಹೊಸ ಸೇರ್ಪಡೆ

ಸದಾನಂದ ಗೌಡ ಸೇರಿ 12 ಸಚಿವರ ತಲೆದಂಡ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 20:19 IST
Last Updated 7 ಜುಲೈ 2021, 20:19 IST
ನೂತನ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದರು –ಪಿಟಿಐ ಚಿತ್ರ
ನೂತನ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದರು –ಪಿಟಿಐ ಚಿತ್ರ   

ನವದೆಹಲಿ: ತಮ್ಮ ನೇತೃತ್ವದ ಎರಡನೇ ಅವಧಿಯ ಸರ್ಕಾರದ ಎರಡನೇ ವರ್ಷದಲ್ಲಿ ಸಂಪುಟದಲ್ಲಿ ಭಾರಿ ಬದಲಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಾಡಿದ್ದಾರೆ. ಮಂತ್ರಿ ಪರಿಷತ್‌ನಿಂದ 12 ಸಚಿವರನ್ನು ಕೈಬಿಟ್ಟಿದ್ದಾರೆ. ಆರೋಗ್ಯ, ಶಿಕ್ಷಣ, ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ ಹಾಗೂ ವಾರ್ತಾ ಮತ್ತು ಪ್ರಸಾರದಂತಹ ಮಹತ್ವದ ಖಾತೆಗಳನ್ನು ನಿಭಾಯಿಸುತ್ತಿದ್ದವರ ತಲೆದಂಡವಾಗಿದೆ. ಜ್ಯೋತಿರಾದಿತ್ಯ ಸಿಂಧಿಯಾ, ಸರ್ವಾನಂದ ಸೋನೋವಾಲ್‌ ಮತ್ತು ನಾರಾಯಣ ರಾಣೆ ಸೇರಿ 36 ಹೊಸ ಮುಖಗಳಿಗೆ ಸ್ಥಾನ ಸಿಕ್ಕಿದೆ. ಹಾಲಿ ಸಚಿವರಾಗಿದ್ದ ಏಳು ಮಂದಿಗೆ ಬಡ್ತಿ ದೊರೆತಿದೆ.

ದೇಶವನ್ನು ತಲ್ಲಣಕ್ಕೆ ಈಡುಮಾಡಿರುವ ಕೋವಿಡ್‌ ಪರಿಸ್ಥಿತಿಯ ಸಮರ್ಪಕ ನಿರ್ವಹಣೆಯಲ್ಲಿ ‘ದಕ್ಷತೆ ಪ್ರದರ್ಶಿಸದ’ ಆರೋಗ್ಯ ಸಚಿವ ಹರ್ಷವರ್ಧನ್‌ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದು ನಿರೀಕ್ಷಿತವೇ ಆಗಿದೆ. ಹರ್ಷವರ್ಧನ್‌ ತಲೆದಂಡವು ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಂತೆ ಎಂದು ವಿಶ್ಲೇಷಿಸಲಾಗಿದೆ. ಇಲಾಖೆಗೆ ಸಂಬಂಧಿಸಿದ ಪತ್ರಿಕಾಗೋಷ್ಠಿಯನ್ನು ಅಧಿಕಾರಿಗಳು ನಿರ್ವಹಿಸಿದಾಗಲೇ ಇವರನ್ನು ಕೈಬಿಡುವ ಮುನ್ಸೂಚನೆ ದೊರೆತಿತ್ತು.

ಆದರೆ, ಮೋದಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್‌ ಅವರ ರಾಜೀನಾಮೆಯು ಆಶ್ಚರ್ಯಕ್ಕೆ ಕಾರಣವಾಗಿದೆ. ಕೋವಿಡ್‌ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಾಗ ಇವರು ಸರ್ಕಾರದ ವರ್ಚಸ್ಸು ವೃದ್ಧಿಸಲು ಕೆಲಸ ಮಾಡಲಿಲ್ಲ ಎಂಬುದು ಅವರ ‘ತಲೆದಂಡ’ಕ್ಕೆ ಪ್ರಮುಖ ಕಾರಣ ಎಂಬುದು ರಹಸ್ಯವಾಗಿ ಉಳಿದಿಲ್ಲ. ಮಾಹಿತಿ ತಂತ್ರಜ್ಞಾನ ನಿಯಮಗಳ ಜಾರಿಗೆ ಸಂಬಂಧಿಸಿ ಟ್ವಿಟರ್‌ ಸಂಸ್ಥೆ ಜತೆಗೆ ಆಗಿರುವ ಸಂಘರ್ಷವೂ ರವಿಶಂಕರ್‌ ಪ್ರಸಾದ್‌ ತಲೆದಂಡಕ್ಕೆ ಒಂದು ಕಾರಣ ಎನ್ನಲಾಗುತ್ತಿದೆ. ತಮ್ಮ ಕ್ಷೇತ್ರದಲ್ಲಿ ಕೋವಿಡ್‌ ನಿರ್ವಹಣೆ ಸರಿಯಾಗಿ ಆಗಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ದೂರು ನೀಡಿದ್ದ ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಅವರೂ ತಮ್ಮ ಹುದ್ದೆ ಕಳೆದುಕೊಂಡಿದ್ದಾರೆ.

ADVERTISEMENT

ಈ ಮೂವರು ಸಚಿವರು ಹೊರನಡೆಯುವುದರೊಂದಿಗೆ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದ ಭಾಗವಾಗಿದ್ದವರಲ್ಲಿ ಈಗ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಮಾತ್ರ ಮೋದಿ ನೇತೃತ್ವದ ಸಂಪುಟದಲ್ಲಿ ಉಳಿದಿದ್ದಾರೆ.

ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ (68) ಅವರು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸೂಚನೆಯಂತೆ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯೂ ಅಚ್ಚರಿಗೆ ಕಾರಣವಾಗಿದೆ. ಸಚಿವ ಸ್ಥಾನ ಕಳೆದುಕೊಂಡ ಹಲವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಲಾಗುವುದು ಎಂದು ಹೇಳಲಾಗುತ್ತಿದೆ. ಪಕ್ಷದಲ್ಲಿ ಮಹತ್ವದ ಹಲವು ಹುದ್ದೆಗಳು ಖಾಲಿ ಇವೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಸಚಿವರಾಗಿದ್ದ ಥಾವರ್‌ಚಂದ್‌ ಗೆಹ್ಲೋಟ್‌ ಅವರು ರಾಜೀನಾಮೆ ನೀಡಿದ್ದು, ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ಮಂಗಳವಾರ ನೇಮಿಸಲಾಗಿದೆ.

15 ಮಂದಿ ಸಂಪುಟ ದರ್ಜೆ ಮತ್ತು 28 ಮಂದಿ ಕಿರಿಯ ಸಚಿವರಾಗಿ ಪ್ರಮಾಣ ವಚನ ಪಡೆದುಕೊಂಡಿದ್ದಾರೆ. ಹಾಗಾಗಿ, ಕೇಂದ್ರ ಸಚಿವ ಸಂಪುಟದ ಸದಸ್ಯರ ಸಂಖ್ಯೆಯು 81ಕ್ಕೆ ಏರಿಕೆಯಾಗಿದೆ. ಪುನರ್‌ರಚನೆಯ ಬಳಿಕ ಸಂಪುಟದಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 47 ಮಂದಿಗೆ ಅವಕಾಶ ದೊರೆತಿದೆ. ಮುಸ್ಲಿಂ ಸಮುದಾಯದ ಯಾರೊಬ್ಬರನ್ನೂ ಸೇರ್ಪಡೆ ಮಾಡಿಲ್ಲ. ಹಾಗಾಗಿ, ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಅವರೊಬ್ಬರೇ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವ ವ್ಯಕ್ತಿಯಾಗಿದ್ದಾರೆ.

ಹೊಸತಾಗಿ ಸೇರ್ಪಡೆ ಆದವರಲ್ಲಿ 35 ವರ್ಷ ವಯಸ್ಸಿನ ನಿಸಿತ್‌ ಪ್ರಮಾಣಿಕ್‌ ಅತ್ಯಂತ ಕಿರಿಯರಾಗಿದ್ದರೆ, 69 ವರ್ಷ ವಯಸ್ಸಿನ ನಾರಾಯಣ ರಾಣೆ ಹಿರಿಯರು. ಈ ಸಚಿವ ಸಂಪುಟದ ಸದಸ್ಯರ ಸರಾಸರಿ ವಯಸ್ಸು 58, ಹಾಗಾಗಿ, ಅದು ಅತ್ಯಂತ ಕಿರಿಯ ವಯಸ್ಸಿನ ಸಂಪುಟವಾಗಿದೆ.

ಯುವ ಮತ್ತು ಚಲನಶೀಲ ಸಂಪುಟ ಎಂಬ ವರ್ಚಸ್ಸನ್ನು ಪಡೆದುಕೊಳ್ಳುವುದು ಕೂಡ ಭಾರಿ ಪುನರ್‌ರಚನೆಯ ಹಿಂದಿನ ಉದ್ದೇಶವಾಗಿತ್ತು ಎಂದೂ ಹೇಳಲಾಗಿದೆ. ಜತೆಗೆ, ಎರಡು ಮತ್ತು ಮೂರನೇ ಹಂತದ ಮುಖಂಡರನ್ನು ಮುನ್ನೆಲೆಗೆ ತಂದು ಬಿಜೆಪಿಯ ಮುಂದಿನ ತಲೆಮಾರಿನ ನಾಯಕರನ್ನು ರೂಪಿಸುವ ಗುರಿಯನ್ನೂ ಹೊಂದಿದೆ ಎನ್ನಲಾಗಿದೆ.

ಪ್ರತಿಭೆಯ ಕೊರತೆ ಇದೆ ಎಂಬ ಆರೋಪ ಹೊತ್ತಿದ್ದ ಸಂಪುಟಕ್ಕೆ ವೃತ್ತಿಪರ ನೈಪುಣ್ಯವನ್ನು ಒದಗಿಸುವ ಪ್ರಯತ್ನವೂ ಪುನರ್‌ರಚನೆಯ ಹಿಂದೆ ಅಡಗಿದೆ ಎಂದು ಹೇಳಲಾಗಿದೆ. ಹೊಸ ತಂಡದಲ್ಲಿ 13 ವಕೀಲರು, ಆರು ವೈದ್ಯರು, ಐವರು ಎಂಜಿನಿಯರ್‌ಗಳು, ಏಳು ಮಾಜಿ ಅಧಿಕಾರಿಗಳು ಇದ್ದಾರೆ. ಏಳು ಸಚಿವರು ಪಿಎಚ್‌.ಡಿ ಪದವಿ ಹೊಂದಿದ್ದರೆ, ಮೂವರು ಎಂಬಿಎ ಓದಿದವರು.

ಗೃಹ, ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ಸಚಿವರನ್ನು ಬಿಟ್ಟರೆ ಬೇರೆಲ್ಲ ಸಚಿವರು ಬದಲಾಗುವ ಸಾಧ್ಯತೆ ಇದೆ. ಕೋವಿಡ್‌ ನಿರ್ವಹಣೆಯಲ್ಲಿ ಆಗಿದೆ ಎನ್ನಲಾದ ವೈಫಲ್ಯವು ಸರ್ಕಾರದ ಜತೆಗೆ ಪ್ರಧಾನಿ ಮೋದಿ ಅವರ ವರ್ಚಸ್ಸಿಗೂ ಏಟು ಕೊಟ್ಟಿದೆ. ಹಾಗಾಗಿ ಹೊಸ ತಂಡವು ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಅಭಿವೃದ್ಧಿಗೆ ಪುನಶ್ಚೇತನ ಕೊಟ್ಟು, ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲಿದೆಯೇ ಎಂಬ ಕುತೂಹಲ ಇದೆ. ‌

ಉತ್ತರ ಪ್ರದೇಶ ಸೇರಿ ಆರು ರಾಜ್ಯಗಳಲ್ಲಿ 2021ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದನ್ನು ಗಮನದಲ್ಲಿ ಇರಿಸಿಕೊಂಡೇ ಪುನರ್‌ರಚನೆ ನಡೆದಿದೆ. ಜಾತಿ ಪ್ರಾತಿನಿಧ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಉತ್ತರ ‍ಪ್ರದೇಶದ ಏಳು ಮಂದಿ ಹೊಸದಾಗಿ ಸಚಿವರಾಗಿದ್ದಾರೆ.

ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿ, ಮಧ್ಯಪ್ರದೇಶವನ್ನು ಬಿಜೆಪಿಗೆ ಮರಳಿ ದೊರೆಯುವಂತೆ ಮಾಡಿದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ದೊರೆಯುತ್ತದೆ ಎಂದು ಖಚಿತವಾಗಿತ್ತು. ರಾಜ್ಯಸಭಾ ಸದಸ್ಯರಾಗಿರುವ ಸಿಂಧಿಯಾ ಅವರು ಪ್ರಬಲ ಖಾತೆಯನ್ನು ಎದುರು ನೋಡುತ್ತಿದ್ದಾರೆ.

ಅಸ್ಸಾಂನ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿದ್ದ ಸರ್ವಾನಂದ ಸೋನೊವಾಲ್ ಅವರು ಹಿಮಂತ ಬಿಸ್ವ ಶರ್ಮಾ ಅವರಿಗಾಗಿ ತಮ್ಮ ಪದವಿ ತ್ಯಾಗ ಮಾಡಿದ್ದರು. ಮಹಾರಾಷ್ಟ್ರದಲ್ಲಿ ಈಗ ವಿರೋಧ ಪಕ್ಷಗಳ ಮೈತ್ರಿ ಸರ್ಕಾರ ಇದೆ. ಅಲ್ಲಿ ಅಧಿಕಾರಕ್ಕೆ ಮರಳುವ ತಂತ್ರವಾಗಿಯೇ ಹಿರಿಯ ನಾಯಕ ನಾರಾಯಣ ರಾಣೆ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.

ಎರಡು ವರ್ಷಗಳಲ್ಲಿ ಬಿಜೆಪಿಯು ಶಿವಸೇನಾ ಮತ್ತು ಶಿರೋಮಣಿ ಅಕಾಲಿ ದಳದಂತಹ ಪ್ರಮುಖ ಮಿತ್ರಪಕ್ಷಗಳನ್ನು ಕಳೆದುಕೊಂಡಿದೆ. ಹೀಗಾಗಿ ಈಗಿನ ಮಿತ್ರಪಕ್ಷಗಳ ಜತೆಗಿನ ಸಖ್ಯ ಗಟ್ಟಿಗೊಳಿಸಿಕೊಳ್ಳುವ ಸಲುವಾಗಿಯೇ ಅಪ್ನಾದಳದ ಅನುಪ್ರಿಯಾ ಪಟೇಲ್, ಜೆಡಿಯು ನಾಯಕ ಆರ್‌.ಸಿ.ಪಿ.ಸಿಂಗ್ ಮತ್ತು ಎಲ್‌ಜೆಪಿಯ ಪಶುಪತಿ ‍ಪಾರಸ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೆಂದರ್ ಯಾದವ್, ಮಧ್ಯಪ್ರದೇಶದ ಟೀಕಾಮಾರ್ಗ್‌ ಸಂಸದ ವಿರೇಂದ್ರ ಕುಮಾರ್, ಒಡಿಶಾದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅಶ್ವಿನಿ ವಿಶ್ವಾಸ್, ಕರ್ನಾಟಕದ ಶೋಭಾ ಕರಂದ್ಲಾಜೆ ಮತ್ತು ರಾಜೀವ್ ಚಂದ್ರಶೇಖರ್, ಅಜಯ್ ಭಟ್, ಸುನಿಲ್ ದುಗ್ಗಾಲ್, ಮೀನಾಕ್ಷಿ ಲೇಖಿ, ಭಾರತಿ ಪವಾರ್, ಸಂತನಿ ಠಾಕೂರ್ ಮತ್ತು ಕಪಿಲ್ ಪಾಟೀಲ್‌ ಅವರು ಮಂತ್ರಿಮಂಡಲ ಸೇರಿರುವ ಪ್ರಮುಖರು.

ಸಂಪುಟ ವಿಸ್ತರಣೆ ಮತ್ತು ಸರ್ಜರಿಯು ಶಕ್ತಿ, ಅನುಭವ, ಪರಿಣತಿ ಮತ್ತು ಚುನಾವಣೆ ಆದ್ಯತೆಗಳ ಮಿಶ್ರಣವಾಗಿದೆ. ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಬಿಜೆಪಿ ಮುಕ್ತವಾಗಿದೆ ಎಂಬ ಸಂದೇಶವನ್ನು ಈ ಸಂಪುಟ ವಿಸ್ತರಣೆಯ ಮೂಲಕ ರವಾನಿಸಲಾಗಿದೆ. ಸಂಪುಟ ವಿಸ್ತರಣೆಯಲ್ಲಿ ಪ್ರಾದೇಶಿಕ ಸಮತೋಲನವನ್ನೂ ಕಾಯ್ದುಕೊಳ್ಳಲಾಗಿದೆ.

ಸಚಿವ ಸ್ಥಾನ ಕಸಿದ ‘ಮಾನಹಾನಿ’ ಪ್ರಕರಣ
ಬೆಂಗಳೂರು:
ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆಯಂತಹ ಮಹತ್ವದ ಖಾತೆ ಹೊಂದಿದ್ದ ಡಿ.ವಿ. ಸದಾನಂದಗೌಡರು ಸಚಿವ ಸ್ಥಾನ ಕಳೆದುಕೊಳ್ಳಲು ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳ ವಿರುದ್ಧ ಅವರು ತಂದಿದ್ದ ತಡೆಯಾಜ್ಞೆ ಕಾರಣವಾಯಿತೇ ಎಂಬ ಚರ್ಚೆ ಬಿಜೆಪಿಯಲ್ಲಿ ಶುರುವಾಗಿದೆ.

ಆಕಸ್ಮಿಕ ರಾಜಕೀಯ ಸನ್ನಿವೇಶವೊಂದರಲ್ಲಿ ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೇರಿದ ಸದಾನಂದಗೌಡರು ತಮ್ಮ ವರ್ಚಸ್ಸನ್ನು ಆಗ ಉಳಿಸಿಕೊಂಡಿದ್ದರು. ತಮ್ಮನ್ನು ಮುಖ್ಯಮಂತ್ರಿ ಮಾಡಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿರುದ್ಧವಾಗಿ ಅವರು ನಡೆಯತೊಡಗಿದ್ದರಿಂದಾಗಿ ಅಕಾಲಿಕವಾಗಿ ಅಧಿಕಾರ ತ್ಯಜಿಸುವ ಅನಿವಾರ್ಯಕ್ಕೆ ಅವರನ್ನು ದೂಡಲಾಗಿತ್ತು.

2014ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಅವರಿಗೆ, ಕರ್ನಾಟಕದಲ್ಲಾದ ‘ಅನ್ಯಾಯ’ಕ್ಕೆ ಪರಿಹಾರವೆಂಬಂತೆ ಆಯಕಟ್ಟಿನ ಸಚಿವ ಸ್ಥಾನಗಳೇ ಸಿಕ್ಕಿದ್ದವು. ಅಲ್ಲಿಯೂ ನಿರೀಕ್ಷಿತ ದಕ್ಷತೆ, ಶ್ರಮ, ಚುರುಕುತನ ತೋರದೇ ಕಳಪೆ ನಿರ್ವಹಣೆಯಿಂದಾಗಿ ಕರ್ನಾಟಕ ಪ್ರತಿನಿಧಿಸುವವರಿಗೆ ಸಿಕ್ಕಿದ್ದ ರೈಲ್ವೆ ಖಾತೆಯು ಅಲ್ಪಕಾಲದಲ್ಲೇ ಅವರಿಂದ ಕೈತಪ್ಪಿ ಹೋಗಿತ್ತು. ಅದಾದ ಬಳಿಕ ಕಾನೂನು ಸಚಿವರಾಗಿಯೂ ಕೆಲಸ ಮಾಡಿದ್ದರು. ಬಳಿಕ ಅದೂ ಅವರ ಕೈತಪ್ಪಿತು. ಅಂತಿಮವಾಗಿ ಅವರನ್ನು ಕಾರ್ಯಕ್ರಮಗಳ ಅನುಷ್ಠಾನ ಮತ್ತು ಅಂಕಿಅಂಶ ಖಾತೆ ಸಚಿವರನ್ನಾಗಿ ಮಾಡಲಾಯಿತು.

ಎಚ್‌.ಎನ್. ಅನಂತಕುಮಾರ್ ಅಕಾಲಿಕ ನಿಧನದ ತರುವಾಯ, ಅವರು ನಿರ್ವಹಿಸುತ್ತಿದ್ದ ರಸಗೊಬ್ಬರ ಖಾತೆ ಗೌಡರ ಹೆಗಲೇರಿತು. ಎನ್‌ಡಿಎ ಎರಡನೇ ಅವಧಿಯಲ್ಲಿ ಅದೇ ಖಾತೆಯೇ ಮುಂದುವರಿಯಿತು. ಅವರ ಕಾರ್ಯ ನಿರ್ವಹಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೃಪ್ತಿ ಇರಲಿಲ್ಲ ಎನ್ನಲಾಗಿತ್ತು. ಇದರ ಜತೆಗೆ, ಇತ್ತೀಚೆಗೆ ಸದ್ದು ಮಾಡತೊಡಗಿದ್ದ ವಿಡಿಯೊ ಪ್ರಕರಣ ಅವರನ್ನು ಸಂಪುಟದಿಂದ ಕೈ ಬಿಡಬೇಕಾದ ಸಂದಿಗ್ದತೆಗೆ ಕಾರಣವಾಗಿತ್ತು ಎಂದೂ ಹೇಳಲಾಗುತ್ತಿದೆ. ಈ ವಿಡಿಯೊ ಬಹಿರಂಗಗೊಂಡರೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂಬ ಕಾರಣಕ್ಕೆ, ತಮ್ಮ ವಿರುದ್ಧ ಯಾವುದೇ ರೀತಿಯ ಮಾನಿಹಾನಿಕಾರಕ ಸುದ್ದಿ ಪ್ರಕಟಿಸಬಾರದು ಎಂದು ಸದಾನಂದಗೌಡರು ಕಳೆದ ವಾರವಷ್ಟೇ ತಡೆಯಾಜ್ಞೆ ತಂದಿದ್ದರು. ಈ ಪ್ರಕರಣ, ಸಚಿವ ಸ್ಥಾನ ಕೈತಪ್ಪಲು ತತ್‌ಕ್ಷಣದ ಕಾರಣ ಎಂದು ಬಿಜೆಪಿ ನಾಯಕರ ಮಧ್ಯೆ ಚರ್ಚೆ ನಡೆಯುತ್ತಿದೆ.

ಏಳು ಮಂದಿಗೆ ಸಂಪುಟ ಸಚಿವರಾಗಿ ಬಡ್ತಿ
ಕಿರಿಯ ಸಹೋದ್ಯೋಗಿಗಳಾಗಿದ್ದ ಏಳು ಮಂದಿಗೆ ಮೋದಿ ಅವರು ಸಂಪುಟ ಸಚಿವರಾಗಿ ಬಡ್ತಿ ನೀಡಿದ್ದಾರೆ.

ಕಿರಣ್‌ ರಿಜಿಜು, ಆರ್‌.ಕೆ. ಸಿಂಗ್‌, ಹರ್‌ದೀಪ್‌ ಸಿಂಗ್‌ ಪುರಿ, ಮನ್‌ಸುಖ್‌ ಮಾಂಡವೀಯ, ಪುರುಷೋತ್ತಮ ರೂಪಾಲಾ, ಜಿ. ಕಿಶನ್‌ ರೆಡ್ಡಿ ಮತ್ತು ಅನುರಾಗ್‌ ಠಾಕೂರ್‌ ಬಡ್ತಿ ಪಡೆದವರು. ರಿಜಿಜು ಅವರು ಕ್ರೀಡೆ, ಸಿಂಗ್‌ ಅವರು ವಿದ್ಯುತ್‌, ಪುರಿ ಅವರು ನಾಗರಿಕ ವಿಮಾನಯಾನ, ಮಾಂಡವೀಯ ಅವರು ಹಡಗುಯಾನ ಖಾತೆಯ ರಾಜ್ಯ ಸಚಿವರಾಗಿದ್ದರು. ಅವರೆಲ್ಲರೂ ಸ್ವತಂತ್ರ ಹೊಣೆಗಾರಿಕೆ ಹೊಂದಿದ್ದರು. ಏಳು ಸಚಿವರ ಕಾರ್ಯದಕ್ಷತೆಯನ್ನು ಮೆಚ್ಚಿ ಬಡ್ತಿ ನೀಡಲಾಗಿದೆ ಎಂದು ಹೇಳಲಾಗಿದೆ.

ರಾಜ್ಯದ ನಾಲ್ವರಿಗೆ ಸ್ಥಾನ

ಡಿ.ವಿ. ಸದಾನಂದ ಗೌಡ ಅವರು ಸಚಿವ ಸ್ಥಾನ ಕಳೆದುಕೊಂಡರೂ, ರಾಜ್ಯದ ನಾಲ್ವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

ರಾಜೀವ್‌ ಚಂದ್ರಶೇಖರ್‌-(ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ)

ಶೋಭಾ ಕರಂದ್ಲಾಜೆ-(ಕೃಷಿ ಮತ್ತು ರೈತರ ಅಭಿವೃದ್ಧಿ)

ಎ. ನಾರಾಯಣ ಸ್ವಾಮಿ-(ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ)

ಭಗವಂತ ಖೂಬಾ- (ಹೊಸ ಮತ್ತು ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ)

**
ಮೋದಿಯೇ ಕೆಳಗೆ ಇಳಿಯಬೇಕಿತ್ತು: ರಣದೀಪ್ ಸಿಂಗ್ ಸುರ್ಜೇವಾಲಾ
ನವದೆಹಲಿ:
‘ಕೇಂದ್ರ ಸಚಿವ ಸಂಪುಟದಲ್ಲಿನ ಬದಲಾವಣೆಗೆ ಕಾರ್ಯಕ್ಷಮತೆಯೇ ಮಾನದಂಡವಾಗಿದ್ದರೆ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ಥಾನದಿಂದ ಕೆಳಗೆ ಇಳಿಯಬೇಕಿತ್ತು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅಭಿಪ್ರಾಯಪಟ್ಟಿದ್ದಾರೆ.

‘ದೇಶವನ್ನು ಸ್ಥಗಿತಸ್ಥಿತಿಗೆ ತಂದ ಕಾರಣಕ್ಕೆ, ಶಾಂತಿ ಮತ್ತು ಸೌಹಾರ್ದವನ್ನು ಕಸದಬುಟ್ಟಿಗೆ ಎಸೆದ ಕೃತ್ಯಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ಸ್ಥಾನದಿಂದ ಕೆಳಗೆ ಇಳಿಯಬೇಕಿತ್ತು’ ಎಂದು ರಣದೀಪ್ ಹೇಳಿದ್ದಾರೆ.

‘ಕಾರ್ಯಕ್ಷಮತೆಯೇ ಮಾನದಂಡವಾಗಿದ್ದರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಚಿವರ ಸ್ಥಾನದಿಂದ ವಜಾ ಮಾಡಬೇಕಿತ್ತು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.