ಲೆಪ್ಚಾ (ಹಿಮಾಚಲ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದರು.
ಇಂದು (ಭಾನುವಾರ) ಬೆಳಿಗ್ಗೆ ಮೋದಿ ಹಿಮಾಚಲ ಪ್ರದೇಶಕ್ಕೆ ಆಗಮಿಸಿದ್ದು, ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುವ ಮೂಲಕ ಭದ್ರತಾ ಪಡೆಗಳ ಧೈರ್ಯ ಮತ್ತು ಸಾಹಸವನ್ನು ಶ್ಲಾಘಿಸಿದರು.
ಸೈನಿಕರೊಂದಿಗೆ ಸಂವಾದ ನಡೆಸುತ್ತಿರುವ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ನಮ್ಮ ಕೆಚ್ಚೆದೆಯ ಭದ್ರತಾ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸುವುದು ಉತ್ತಮ ಭಾವನೆಯಾಗಿದ್ದು, ಹೆಮ್ಮೆಯ ಅನುಭವವಾಗಿದೆ’ ಎಂದು ತಿಳಿಸಿದರು.
‘ಸೈನಿಕರು ತಮ್ಮ ಕುಟುಂಬಗಳಿಂದ ದೂರವಿದ್ದು, ದೇಶದ ರಕ್ಷಣೆಗೆ ಕಾವಲುಗಾರರಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವ ಮೂಲಕ ನಮ್ಮ ಜೀವನವನ್ನು ಬೆಳಗಿಸುತ್ತಾರೆ. ಅವರ ತ್ಯಾಗ ಮತ್ತು ಸಮರ್ಪಣೆ ದೇಶದ ಜನತೆಯನ್ನು ಸುರಕ್ಷಿತವಾಗಿರಿಸುತ್ತದೆ. ಈ ವೀರರಿಗೆ ದೇಶವು ಯಾವಾಗಲೂ ಕೃತಜ್ಞರಾಗಿರಬೇಕು’ ಎಂದು ಮೋದಿ ಹೇಳಿದರು.
'ಎಲ್ಲರಿಗೂ ದೀಪಾವಳಿಯ ಶುಭಾಶಯಗಳು! ಈ ವಿಶೇಷ ಹಬ್ಬ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಆರೋಗ್ಯವನ್ನು ತರಲಿ' ಎಂದು ದೇಶದ ಜನತೆಗೆ ದೀಪಾವಳಿ ಶುಭಾಶಯಗಳನ್ನು ಪ್ರಧಾನಿ ಮೋದಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.