ನವದೆಹಲಿ: ಆಸ್ಪತ್ರೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿಶಾಮಕ ಮತ್ತು ವಿದ್ಯುತ್ ಸುರಕ್ಷತೆಯ ಕುರಿತು ನಿಯಮಿತವಾಗಿ ಪರಿಶೋಧನೆ ನಡೆಸುವ ಅಗತ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪ್ರತಿಪಾದಿಸಿದರು.
ದೇಶದಲ್ಲಿ ಶಾಖಾಘಾತ ಮತ್ತು ಅಗ್ನಿ ಅನಾಹುತಗಳು ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಅವಲೋಕನಾ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ರಚನೆಯಾಗುವ ನೂತನ ಸರ್ಕಾರದ 100 ದಿನಗಳ ಕಾರ್ಯಸೂಚಿಯ ಬಗ್ಗೆಯೂ ಚರ್ಚಿಸಿದರು.
ಎನ್‌ಡಿಎ ಒಕ್ಕೂಟವು ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ, ಮೂರನೇ ಬಾರಿ ಅಧಿಕಾರಕ್ಕೇರಲಿದೆ ಎಂದು ಸಮೀಕ್ಷೆಗಳು ಶನಿವಾರ ಹೇಳಿದ್ದವು.
ಶಾಖಾಘಾತ ಮತ್ತು ಕಾಳ್ಗಿಚ್ಚಿನ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮೋದಿ ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
‘ರೆಮಲ್’ ಚಂಡಮಾರುತದಿಂದಾದ ಹಾನಿ ಹಾಗೂ ಮಿಜೋರಾಂ, ಅಸ್ಸಾಂ, ಮಣಿಪುರ, ಮೇಘಾಲಯ ಮತ್ತು ತ್ರಿಪುರಾದಲ್ಲಿನ ಪ್ರವಾಹ ಪರಿಸ್ಥಿತಿ ಹಾಗೂ ಭೂಕುಸಿತದ ಬಗ್ಗೆಯೂ ಮೋದಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು ಎಂದು ಹೇಳಿಕೆ ತಿಳಿಸಿದೆ.
ಇದೇ 5ರಂದು ನಡೆಯಲಿರುವ ವಿಶ್ವ ಪರಿಸರ ದಿನದ ಸಿದ್ಧತೆಗಳ ಬಗ್ಗೆಯೂ ಮೋದಿ ಅವರು ಅವಲೋಕನಾ ಸಭೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.