ನವದೆಹಲಿ:ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ಸದ್ಯದ ಮಟ್ಟಿಗೆ ಕೇಂದ್ರ ಸರ್ಕಾರವನ್ನು ನಿರಾಳವಾಗಿಸಿರಬಹದು. ಆದರೆ, ಪ್ರಕರಣ ಇಲ್ಲಿಗೇ ಸಂಪೂರ್ಣವಾಗಿ ಬಗೆಹರಿದಂತೆ ಗೋಚರಿಸುತ್ತಿಲ್ಲ. ರಫೇಲ್ ಒಪ್ಪಂದದ ಅಂತಿಮ ದರ ನಿಗದಿ ವೇಳೆ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿನೇತೃತ್ವದ ರಕ್ಷಣಾ ವ್ಯವಹಾರಗಳ ಸಚಿವ ಸಂಪುಟ ಸಮಿತಿಯೇ ಅಂತಿಮ ದರ ನಿಗದಿಪಡಿಸಿದೆ.ಈ ವಿಚಾರ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಒಳಗೊಂಡಿರಲಿಲ್ಲ ಎಂದು ದಿ ಕ್ಯಾರವಾನ್ ನಿಯತಕಾಲಿಕ ವರದಿ ಮಾಡಿದೆ.
ಈ ವಿಚಾರ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಮತ್ತೆ ಚರ್ಚೆ ಹುಟ್ಟುಹಾಕುವ ಸಾಧ್ಯತೆ ಇದೆ. ಪ್ರಕರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂಬ ಕಾಂಗ್ರೆಸ್ ಆಗ್ರಹಕ್ಕೆ ಇದು ಇನ್ನಷ್ಟು ಪುಷ್ಟಿ ನೀಡಲಿದೆ.
ಆರಂಭದಲ್ಲಿ ರಫೇಲ್ ಒಪ್ಪಂದದ ದರ 520 ಕೋಟಿ ಯುರೋ (ಅಂದಾಜು ₹4 ಲಕ್ಷ ಕೋಟಿಗೂ ಹೆಚ್ಚು) ಎಂದು ನಿಗದಿಯಾಗಿತ್ತು. ಆದರೆ, 2016ರಲ್ಲಿ ಪ್ರಧಾನಿ ಮೋದಿ ಒಪ್ಪಂದಕ್ಕೆ ಸಹಿ ಹಾಕಿದಾಗ ನಿಗದಿಯಾಗಿದ್ದ ದರ ಆರಂಭದ ದರಕ್ಕಿಂತ 250 ಕೋಟಿ (ಸುಮಾರು ₹2 ಲಕ್ಷ ಕೋಟಿ) ಯುರೋದಷ್ಟು ಹೆಚ್ಚು ಮೊತ್ತದ್ದಾಗಿತ್ತು ಎಂಬುದನ್ನು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರಿಂದ ಖಚಿತಪಡಿಸಿರುವುದಾಗಿ ಕ್ಯಾರವಾನ್ ವರದಿ ಉಲ್ಲೇಖಿಸಿದೆ.
ಆರಂಭದ ಬೆಲೆಯಲ್ಲಿ ಒಪ್ಪಂದ ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂದಿನ ರಕ್ಷಣಾ ಸಚಿವ ಮನೋಹರ್ ಪರ್ರೀಕರ್ ನೇತೃತ್ವದ ರಕ್ಷಣಾ ಉಪಕರಣಗಳ ಖರೀದಿ ಸಮಿತಿ (Defence Acquisition Council- DAC) ಬೆಲೆ ನಿಗದಿ ಮರು ಪರಿಶೀಲನೆಗೆ ಮಾರ್ಗಸೂಚಿ ರೂಪಿಸಲು ಸಲಹೆ ನೀಡಿತು. ಆದರೆ,ಈ ಹಿಂದೆ ಅನುಸರಿಸುತ್ತಿದ್ದ ಕಡ್ಡಾಯ ಪ್ರಕ್ರಿಯೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆಬೆಲೆ ಮರುನಿಗದಿಗೆ ಕ್ರಮ ಅನುಸರಿಸಲಾಗಿತ್ತು. ಹೀಗೆ ಬೆಲೆ ಮರು ನಿಗದಿ ಮಾಡಿದ್ದಕ್ಕೆಮೋದಿ ನೇತೃತ್ವದ ರಕ್ಷಣಾ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಅನುಮೋದನೆ ನೀಡಿತ್ತು. ಇವಿಷ್ಟೂ ವಿಚಾರಗಳುಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಒಳಗೊಂಡಿಲ್ಲ ಎಂದು ವರದಿ ಹೇಳಿದೆ.
2016ರ ಆಗಸ್ಟ್ 24ರಂದು ಅಂತಿಮ ದರಕ್ಕೆ ಪ್ರಧಾನಿ ಅನುಮೋದನೆ ನೀಡಿದ್ದರು. ಬಿಜೆಪಿ ಸರ್ಕಾರವೇ ನಿಯೋಜಿಸಿದ್ದ ತಜ್ಞರು ನಿಗದಿಪಡಿಸಿದ್ದ ದರವನ್ನೇ ಮೀರಿ ಪ್ರಧಾನಿ ಈ ತೀರ್ಮಾನ ಕೈಗೊಂಡಿದ್ದರು. ಈ ಸಂದರ್ಭ, ರಕ್ಷಣಾ ಉಪಕರಣಗಳ ಖರೀದಿ (ಡಿಪಿಪಿ) ಪ್ರಕ್ರಿಯೆಯ ಅನ್ವಯ 2013ರಲ್ಲಿ ನಿಗದಿಪಡಿಸಲಾಗಿದ್ದ ಪ್ರಕ್ರಿಯೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ.
ಡಿಪಿಪಿ ಪ್ರಕಾರ 36 ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದ ದರ ನಿಗದಿಪಡಿಸಲು 2015ರಲ್ಲಿ ಭಾರತೀಯ ಸಂಧಾನ ತಂಡ (ಐಎನ್‌ಟಿ) ರಚಿಸಲಾಗಿತ್ತು.2013ರ ರಕ್ಷಣಾ ಉಪಕರಣಗಳ ಖರೀದಿ ಪ್ರಕ್ರಿಯೆಯ ಅನ್ವಯಐಎನ್‌ಟಿಯಲ್ಲಿ ಏಳು ಸದಸ್ಯರಿದ್ದರು. ಈ ಕುರಿತು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರತಿಕ್ರಿಯೆ ಸಲ್ಲಿಸಿದೆ.
‘ಭಾರತೀಯ ಸಂಧಾನ ತಂಡ (ಐಎನ್‌ಟಿ) ರಚಿಸಲಾಗಿದೆ. ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥ, ಜಂಟಿ ಕಾರ್ಯದರ್ಶಿ ಮತ್ತು ಖರೀದಿ ಮ್ಯಾನೇಜರ್ (ವಾಯುಪಡೆ), ರಕ್ಷಣಾ ಇಲಾಖೆಯ ದೇಶಿ ಕಂಪನಿಗಳ ನಿರ್ವಹಣೆ ವಿಭಾಗದ ಜಂಟಿ ಕಾರ್ಯದರ್ಶಿ, ವಾಯುಪಡೆಯ ಜಂಟಿ ಕಾರ್ಯದರ್ಶಿ ಮತ್ತು ಹೆಚ್ಚುವರಿ ಹಣಕಾಸು ಸಲಹೆಗಾರ, ಹಣಕಾಸು ಮ್ಯಾನೇಜರ್, ವಾಯುಪಡೆಯ ಸಲಹೆ ವಿಭಾಗ ಮತ್ತು ಸಹಾಯಕ ಮುಖ್ಯಸ್ಥರು ಸರ್ಕಾರದ ಕಡೆಯಿಂದ ಐಎನ್‌ಟಿ ಸದಸ್ಯರಾಗಿದ್ದಾರೆ. ಫ್ರಾನ್ಸ್ ಸರ್ಕಾರದ ಕಡೆಯಿಂದ ರಕ್ಷಣಾ ಇಲಾಖೆಯ ಪ್ರಧಾನ ನಿರ್ದೇಶಕರ ನೇತೃತ್ವವಿದೆ. 2015ರ ಮೇನಲ್ಲಿ ಮಾತುಕತೆ ಆರಂಭವಾಗಿದ್ದು, 2016ರ ಏಪ್ರಿಲ್ ವರೆಗೆ ಮುಂದುವರಿದಿದೆ. ಒಟ್ಟು 74 ಬಾರಿ ಮಾತುಕತೆ ನಡೆದಿದೆ. ಈ ಅವಧಿಯಲ್ಲಿ 48 ಆಂತರಿಕಐಎನ್‌ಟಿ ಸಭೆ ಮತ್ತು ಫ್ರಾನ್ಸ್ ಕಡೆಯಿಂದ26 ಬಾರಿ ಸಭೆ ನಡೆದಿದೆ’ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.
ರಕ್ಷಣಾ ಉಪಕರಣಗಳ ಖರೀದಿ ಸಮಿತಿ ಕಡ್ಡಾಯ ಮಾಡಿರುವಂತೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದೆ. ದರ, ವಿತರಣಾ ವೇಳಾಪಟ್ಟಿ, ನಿರ್ವಹಣೆ ನಿಯಮಗಳು, ದೇಶಿ ಪಾಲುದಾರ ಕಂಪನಿ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.