ಭುವನೇಶ್ವರ: ಒಡಿಯಾ ಭಾಷೆಯ ಖ್ಯಾತ ಸಂಗೀತಗಾರ ಮತ್ತು ಗಾಯಕ ಪ್ರಫುಲ್ಲ ಕರ್ ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಭುವನೇಶ್ವರದ ಸತ್ಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಕೆಲವು ದಿನಗಳಿಂದ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇಂದು ಪುರಿಯಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.
1939ರಲ್ಲಿ ಜನಿಸಿದ ಕರ್ ಅವರು ಮೇರು ಸಂಗೀತಗಾರ, ಗಾಯಕ, ಗೀತರಚನೆಕಾರ, ಬರಹಗಾರರಾಗಿ ಬಹುಮುಖ ಪ್ರತಿಭೆಯಾಗಿದ್ದರು. ತಮ್ಮ ಹಲವು ದಶಕಗಳ ಸುಪ್ರಸಿದ್ಧ ವೃತ್ತಿಜೀವನದಲ್ಲಿ ಮಾಂತ್ರಿಕ ಸ್ವರ ಮತ್ತು ಸಂಗೀತ ರಚನೆಯ ಮೂಲಕ ದೇಶದ ಸಂಗೀತ ಪ್ರಿಯರನ್ನು ಮಂತ್ರಮುಗ್ಧಗೊಳಿಸಿದ್ದರು.
ಕಲೆ ಮತ್ತು ಸಂಗೀತ ಕ್ಷೇತ್ರಕ್ಕೆ ಅವರ ಅಮೂಲ್ಯ ಕೊಡುಗೆಗಾಗಿ 2015ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಪ್ರಫುಲ್ಲ ಕರ್ ಅವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಒಡಿಯಾ ಸಂಸ್ಕೃತಿ ಮತ್ತು ಸಂಗೀತ ಕ್ಷೇತ್ರಕ್ಕೆ ನೀಡಿರುವ ಅತ್ಯುನ್ನತ ಕೊಡುಗೆಗಾಗಿ ಚಿರಸ್ಥಾಯಿಯಾಗಿರುತ್ತಾರೆ ಎಂದು ಮೋದಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.