ನವದೆಹಲಿ: ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ಜನ್ಮದಿನ ದಿನವಾದ ಇಂದು (ನ.14) ಕಾಂಗ್ರೆಸ್ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಗುರುವಾರ ಗೌರವ ಸಮರ್ಪಿಸಿದ್ದಾರೆ.
ಬೆಳಿಗ್ಗೆ ಇಲ್ಲಿನ ಶಾಂತಿವನಕ್ಕೆ ಭೇಟಿ ನೀಡಿದ ಪ್ರಿಯಾಂಕ ಗಾಂಧಿ ಪುಷ್ಪ ನಮನ ಸಲ್ಲಿಸಿದರು.
'ಪಂಡಿತ್ ಜವಾಹರ್‌ಲಾಲ್ ನೆಹರೂ ಅವರ ಜನ್ಮದಿನಾಚರಣೆಯ ದಿನದಂದು ಅವರಿಗೆ ನಮನಗಳು' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಜನ್ಮದಿನದಂದು ಅವರಿಗೆ ಗೌರವ ನಮನಗಳು. ಪ್ರಜಾಸತ್ತಾತ್ಮಕ, ಪ್ರಗತಿಪರ, ನಿರ್ಭೀತ, ದೂರದೃಷ್ಟಿಯ ಅವರ ಚಂತನೆಗಳು, ಮೌಲ್ಯಗಳು ಹಿಂದೂಸ್ತಾನದ ಆಧಾರಸ್ತಂಭಗಳಾಗಿವೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಮತ್ತು ಇರುತ್ತವೆ.
ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರು, ಮುಖಂಡರು ಕಾರ್ಯಕರ್ತರು ನೆಹರೂ ಅವರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.
ಕಾಂಗ್ರೆಸ್‌ನ ಮುಂದಾಳು ನೆಹರೂ ಅವರು ದೇಶದ ಪ್ರಧಾನಿಯಾಗಿ ಸುದೀರ್ಘ ಅವಧಿಯವರೆಗೂ ಸೇವೆ ಸಲ್ಲಿಸಿದರು. ನೆಹರೂ ಅವರು ಹುಟ್ಟಿದ ವರ್ಷ 1889.
ನೆಹರೂ ಅವರ ಕುರಿತಾದ ‘ಮಲ್ಟಿಮೀಡಿಯಾ ಡಿಜಿಟಲ್ ಆರ್ಕೈವ್’ ಮುಂದಿನ ವರ್ಷದ ನವೆಂಬರ್‌ನಲ್ಲಿ ಅನಾವರಣಗೊಳ್ಳಲಿದೆ. ನೆಹರೂ ಅವರ ಅಪ್ರಕಟಿತ ಬರಹಗಳೂ ಸೇರಿದಂತೆ ಇಲ್ಲಿಯವರೆಗೆ ದೊರೆಯದ ಕೆಲ ಅಮೂಲ್ಯ ದಾಖಲೆಗಳು ಇದರಲ್ಲಿ ಲಭ್ಯವಾಗಲಿವೆ.
ಜವಾಹರಲಾಲ್ ನೆಹರೂ ಸ್ಮಾರಕ ನಿಧಿಯು (ಜೆಎನ್‌ಎಂಎಫ್) ‘ದಿ ನೆಹರೂ ಆರ್ಕೈವ್’ ಕುರಿತು ಪ್ರಕಟಿಸಿದೆ. ಮುಂದಿನ ವರ್ಷ ನೆಹರೂ ಅವರ 136ನೇ ಜನ್ಮದಿನದಿಂದ (ನವೆಂಬರ್ 14) ಆನ್‌ಲೈನ್ ಆರ್ಕೈವ್ ಆದ nehruarchive.in ಬಳಕೆದಾರರಿಗೆ ಲಭ್ಯವಾಗುತ್ತದೆ ಎಂದು ಅದು ತಿಳಿಸಿದೆ.
‘ದಿ ಸೆಲೆಕ್ಟೆಡ್ ವರ್ಕ್ಸ್ ಆಫ್ ಜವಾಹರಲಾಲ್ ನೆಹರೂ’ದ 100 ಸಂಪುಟಗಳು, 1947ರಿಂದ 1964ರವರೆಗೆ ಅವರು ದೇಶದ ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳು ಮತ್ತು ‘ಲೆಟರ್ಸ್ ಫ್ರಮ್ ಎ ಫಾದರ್ ಟು ಡಾಟರ್’, ‘ಗ್ಲಿಂಪ್ಸೆಸ್ ಆಫ್ ವರ್ಲ್ಡ್ ಹಿಸ್ಟರಿ, ಎನ್ ಆಟೊಬಯೋಗ್ರಫಿ’, ‘ದಿ ಯೂನಿಟಿ ಆಫ್ ಇಂಡಿಯಾ’, ‘ದಿ ಡಿಸ್ಕವರಿ ಆಫ್ ಇಂಡಿಯಾ’, ‘ಎ ಬಂಚ್ ಆಫ್ ಓಲ್ಡ್ ಲೆಟರ್ಸ್’ ಸೇರಿದಂತೆ ಅವರ ಪುಸ್ತಕಗಳು ಹಾಗೂ ಇತರ ಬರಹಗಳು ಇಲ್ಲಿ ಸುಲಭವಾಗಿ ದೊರೆಯುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.