ADVERTISEMENT

ಡ್ರೋಣ್‌, ಟೆಲಿಸ್ಕೋಪಿಕ್‌ ಬಂದೂಕಿನಿಂದ ಮೋದಿ ಹತ್ಯೆಯಾಗುವ ಸಾಧ್ಯತೆ ಇತ್ತು: ಸಚಿವ

ಪಿಟಿಐ
Published 8 ಜನವರಿ 2022, 5:44 IST
Last Updated 8 ಜನವರಿ 2022, 5:44 IST
ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌
ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌    

ನವದೆಹಲಿ: ಪಂಜಾಬ್‌ನಲ್ಲಿ ಸಂಭವಿಸಿದ ಭದ್ರತಾ ವೈಫಲ್ಯವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೃತ್ಯು ಕೂಪಕ್ಕೆ ದೂಡುವ ಸಂಚಾಗಿತ್ತು. ಅವರನ್ನು ಡ್ರೋಣ್‌ ಅಥವಾ ಟೆಲಿಸ್ಕೋಪಿಕ್ ಬಂದೂಕಿನಿಂದ ಹತ್ಯೆ ಮಾಡುವ ಸಾಧ್ಯತೆಗಳಿದ್ದವು ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಘಟನೆಯು ಕೇವಲ ಮುಖ್ಯಮಂತ್ರಿ ಕಚೇರಿಯ ಪ್ರಮಾದ ಮಾತ್ರವಲ್ಲದೇ, ಇದರ ಹಿಂದೆ ಷಡ್ಯಂತ್ರವಿದೆ ಎಂಬುದು ಸೂಕ್ತ ತನಿಖೆಯಿಂದ ಗೊತ್ತಾಗಲಿದೆ ಎಂದು ಅವರು ಟ್ವೀಟ್‌ ಮಾಡಿ ಅಭಿಪ್ರಾಯಪಟ್ಟಿದ್ದಾರೆ.

‘ಪ್ರಧಾನಿ ಅವರನ್ನು ಮೃತ್ಯು ಕೂಪಕ್ಕೆ ತಳ್ಳುವುದು ಕೇವಲ ಕಾಕತಾಳೀಯವಾಗಿರಲಾರದು. ಅದು ಪಿತೂರಿ. ಅವರು ಶಿವನ ಆಶೀರ್ವಾದದಿಂದ ಬದುಕುಳಿದಿದ್ದಾರೆ. ಅವರು ಡ್ರೋಣ್‌ ಅಥವಾ ಟೆಲಿಸ್ಕೋಪಿಕ್ ಬಂದೂಕಿನಿಂದ ಹತ್ಯೆಗೀಡಾಗುವ ಸಾಧ್ಯತೆಗಳಿದ್ದವು,’ ಎಂದು ಸಿಂಗ್‌ ಹೇಳಿದ್ದಾರೆ.

ADVERTISEMENT

ಮುಂದೆ ಹೋಗಲಾಗದೇ ಕಾರಿನಲ್ಲೇ ಉಳಿದ ಮೋದಿ ಅವರ ಚಿತ್ರವನ್ನೂ ತಮ್ಮ ಟ್ವಿಟ್‌ನಲ್ಲಿ ಹಂಚಿಕೊಂಡಿರುವ ಗಿರಿರಾಜ್‌ ಸಿಂಗ್‌, ಘಟನೆಯ ಸೂಕ್ತ ತನಿಖೆ ನಡೆಯಬೇಕು. ಸಂಚುಕೋರರು ಪತ್ತೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಪಂಜಾಬ್‌ನ ಫಿರೋಜ್‌ಪುರದಲ್ಲಿ ಬುಧವಾರ ನಡೆಯಬೇಕಿದ್ದ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ರಸ್ತೆ ಮಾರ್ಗದಲ್ಲಿ ಹೋಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ರಸ್ತೆತಡೆಯ ಕಾರಣ ಮೇಲ್ಸೇತುವೆಯಲ್ಲಿ 15–20 ನಿಮಿಷ ಸಿಲುಕಿದರು. ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡುವುದನ್ನು ವಿರೋಧಿಸಿದ ರೈತ ಸಂಘಟನೆಯು ರಸ್ತೆತಡೆ ನಡೆಸಿತು. ಹೀಗಾಗಿ, ಮೋದಿ ತಮ್ಮ ಕಾರ್ಯಕ್ರಮವನ್ನು ರದ್ದುಪಡಿಸಿ ವಾಪಸಾದರು. ಇದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.