ಕೊಲ್ಕತ್ತಾ: ತನ್ನ ಪತ್ನಿ, ಅಮ್ಮನಿಗೆ ಗೌರವ ಕೊಡದ ವ್ಯಕ್ತಿ ದೇಶವನ್ನು ಗೌರವಿಸುವುದು ಹೇಗೆ ಎಂದು ನಮಗೆ ಹೇಳಿ ಕೊಡುತ್ತಾರಾ? ಈ ರೀತಿಯ ಪ್ರಧಾನಿಯನ್ನು ನಾವು ಯಾವತ್ತೂ ನಂಬಬಾರದು ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಭಾನುವಾರ ಪೂರ್ವ ಮಿಡ್ನಾಪುರ ಜಿಲ್ಲೆಯ ಹೆರಿಯಾ ಎಂಬಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ್ದ ಮಮತಾ, ಮೋದಿಯವರ ಭಾಷಣ ಪ್ರಚೋದನಾಕಾರಿಯಾಗಿದ್ದು ಅವರ ಭಾಷೆ ಅವಮಾನಕರವಾಗಿತ್ತು . ಬಿಜೆಪಿ ಸುಳ್ಳುಗಾರರ ಮತ್ತು ಗೂಂಡಾಗಳ ಪಕ್ಷ. ಗಂಭೀರ ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲು ಅವರು ಧಾರ್ಮಿಕ ವಿಷಯಗಳನ್ನು ಮಾತನಾಡಿ ಬೇರೆಡೆ ಗಮನ ಸೆಳೆಯುತ್ತಾರೆ. ಈ ರೀತಿ ಚುನಾವಣೆ ನಡೆದರೆ ಮುಂದೆಂದೂ ಚುನಾವಣೆ ನಡೆಯದಂತಾಗುತ್ತದೆ.ಎಲ್ಲರೂ ಧರ್ಮದ ವಿಚಾರಗಳ ವಿರುದ್ದ ಹೋರಾಡೋಣ ಎಂದಿದ್ದಾರೆ.
ಮಮತಾ ಮೋದಿ ವಿರುದ್ಧ ಕಿಡಿ ಕಾರಿದ್ದು ಇದೇ ಮೋದಲೇನೂ ಅಲ್ಲ, ಆದರೆ ಮೋದಿ ಕುಟುಂಬದ ವಿರುದ್ಧ ಈ ರೀತಿ ಮಾತನಾಡಿದ್ದು ಇದೇ ಮೊದಲು.
ನೀವು ನಿಮ್ಮ ಕುಟುಂಬವನ್ನು ನೋಡಿದ್ದೀರಾ? ನೀವು ಎಲ್ಲರನ್ನೂ ಒಂಟಿಯಾಗಿ ಬಿಟ್ಟು ಬಂದಿರಿ.ನೀವು ನಿಮ್ಮ ಹೆಂಡತಿಯನ್ನು ನೋಡಿದ್ದೀರಾ? ನಿಮ್ಮ ಅಮ್ಮ, ಮಗಳು, ಸಹೋದರಿ ಬದುಕಿದ್ದಾರೆ ಎಂಬುದು ನಿಮಗೆ ಗೊತ್ತೇ? ನಿಮಗೇನೂ ಗೊತ್ತಿಲ್ಲ ಎಂದುಏಪ್ರಿಲ್ 8ರಂದು ಕೂಚ್ ಬೆಹರ್ ಜಿಲ್ಲೆಯಲ್ಲಿ ಭಾಷಣ ಮಾಡಿದ ಮಮತಾ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಮಮತಾ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಂಗಾಳದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಯಾಂತನ್ ಬಸು, ಪ್ರಧಾನಿಯವರ ವೈಯಕ್ತಿಕ ವಿಷಯಗಳನ್ನು ಹೇಳಿ ಮುಖ್ಯಮಂತ್ರಿಯೊಬ್ಬರು ಈ ರೀತಿ ಟೀಕೆ ಮಾಡುವುದು ಅವಮಾನಕರ. ಮೋದಿ ಜೀಯನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೇ ಇದ್ದಾಗ ಮಮತಾ ವೈಯಕ್ತಿಕ ದಾಳಿ ನಡೆಸುತ್ತಾರೆ.ಇದು ಬೇರೇನೂ ಅಲ್ಲ, ಭಯವನ್ನು ವ್ಯಕ್ತ ಪಡಿಸುವ ರೀತಿ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.