ನವದೆಹಲಿ: ವಾಕ್ ಸ್ವಾತಂತ್ರ್ಯ ಕಸಿದುಕೊಳ್ಳುವ ಮತ್ತು ತನ್ನ ತಪ್ಪುಗಳ ವಿರುದ್ಧ ಮಾತನಾಡುವವರನ್ನು ಜೈಲಿಗಟ್ಟುವ ಪ್ರಧಾನಿ ನರೇಂದ್ರ ಮೋದಿ ಅವರು ಬಡವರನ್ನು ಬಡವರನ್ನಾಗಿಸುವ ಮತ್ತು ಶ್ರೀಮಂತರನ್ನು ಶ್ರೀಮಂತರನ್ನಾಗಿಸುವ ಧೋರಣೆ ಹೊಂದಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಆರೋಪಿಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಪ್ರಧಾನಿಯನ್ನು ಕೋಟ್ಯಧಿಪತಿಗಳ ಕೈಗೊಂಬೆ ಎಂದು ವಾಗ್ದಾಳಿ ನಡೆಸಿದ ಮರು ದಿನ ಖರ್ಗೆ ಅವರು ವಾಗ್ದಾಳಿ ನಡೆಸಿದರು.
ಜಾರ್ಖಂಡ್‌ನ ಜಾಮತಾಢಾ ಮತ್ತು ರಾಂಚಿಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ರಾಹುಲ್ ಮತ್ತು ತಮ್ಮ ಹೆಲಿಕಾಪ್ಟರ್ ಸಂಚಾರದ ವಿಳಂಬದ ಕುರಿತು ಪ್ರಶ್ನೆ ಮಾಡಿದರು.
ಜೆಎಂಎಂ ತೊರೆದು ಬಿಜೆಪಿ ಸೇರಿದ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರನ್ನು ‘ದ್ರೋಹಿ’ ಎಂದು ಕರೆದ ಖರ್ಗೆ ಅವರು, ತಮ್ಮನ್ನು ಪೋಷಿಸಿದ ಜನರಿಗೆ ಅವರು ವಿಶ್ವಾಸದ್ರೋಹ ಬಗೆದಿದ್ದಾರೆ ಎಂದು ದೂರಿದರು.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಈ ವರ್ಷದ ಆರಂಭದಲ್ಲಿ ಜೈಲಿಗೆ ಹಾಕಿದ್ದನ್ನು ಪ್ರಸ್ತಾಪಿಸಿದ ಅವರು, ಬುಡಕಟ್ಟು ಸಮುದಾಯದ ಮುಖ್ಯಮಂತ್ರಿಯನ್ನು ಜೈಲಿಗಟ್ಟುವುದು ಪ್ರಜಾಪ್ರಭುತ್ವವೇ ಎಂದು ಪ್ರಶ್ನಿಸಿದರು. ಬಿಜೆಪಿಯು ತನ್ನ ವಿರುದ್ಧ ಮಾತನಾಡುವವರನ್ನು ಈ ಮೂಲಕ ಹತ್ತಿಕ್ಕುತ್ತಿದೆ ಎಂದರು.
ಪ್ರಧಾನಿ ಆವಾಸ್ ಯೋಜನೆಯಡಿ ಜಾರ್ಖಂಡ್‌ಗೆ ನೀಡಬೇಕಾದ 1.36 ಲಕ್ಷ ಕೋಟಿ ಬಿಡುಗಡೆ ಮಾಡದೆ, ಮೋದಿ ಅವರ ಅದರ ಮೇಲೆ ಕುಳಿತಿದ್ದಾರೆ ಎಂದು ಅವರು ಟೀಕಿಸಿದರು.
ಬಡವರನ್ನು ಬಡವರನ್ನಾಗಿಸಲಾಗಿತ್ತಿದೆ: ‘ಮೋದಿ ಅವರ ಅವಧಿಯಲ್ಲಿ ದೇಶದ ಶೇ 62ರಷ್ಟು ಸಂಪತ್ತು ಕೇವಲ ಶೇ 5ರಷ್ಟು ಶ್ರೀಮಂತರ ಬಳಿ ಕೇಂದ್ರೀಕೃತವಾಗಿದ್ದರೆ, ಶೇ 3ರಷ್ಟು ಸಂಪತ್ತು ಶೇ 50ರಷ್ಟು ಜನರ ಬಳಿಯಿದೆ. ಹೀಗೆ ಪ್ರಧಾನಿಯವರ ನೀತಿಗಳು ಶ್ರೀಮಂತರನ್ನು ಶ್ರೀಮಂತರನ್ನಾಗಿಸುತ್ತಿದ್ದರೆ, ಬಡವರನ್ನು ಬಡವರನ್ನಾಗಿಸುತ್ತಿದೆ. ಈ ಮೂಲಕ ಮೋದಿ ಅವರು ಸಾಮಾನ್ಯ ಜನರಿಗೆ ದ್ರೋಹ ಎಸಗುತ್ತಿದ್ದಾರೆ. ಅವರು ನಿಮ್ಮ ನೀರು, ಅರಣ್ಯ ಮತ್ತು ಜಮೀನನ್ನು ಕೈಗಾರಿಕೋದ್ಯಮಿಗಳಿಗೆ ಒಪ್ಪಿಸುತ್ತಿದ್ದಾರೆ’ ಎಂದು ಖರ್ಗೆ ಆರೋಪಿಸಿದರು.
ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಮೋದಿ ಅವರು, ತನ್ನನ್ನು ವಿರೋಧಿಸುವವರನ್ನು ಜಾರಿ ನಿರ್ದೇಶನಾಲಯ, ಸಿಬಿಐ, ಐಟಿ ಮೂಲಕ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುತ್ತಿದ್ದಾರೆ. ಆ ಮೂಲಕ ಅವರು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ ಅಲ್ಲತೆ, ತನ್ನ ತಪ್ಪುಗಳನ್ನು ಎತ್ತಿ ತೋರಿಸುವವರನ್ನು ಜೈಲಿಗಟ್ಟುತ್ತಿದ್ದಾರೆ ಎಂದು ದೂರಿದರು.
ಹೆಲಿಕಾಪ್ಟರ್ 20 ನಿಮಿಷ ತಡ: ‘ಇಂದು ಗೃಹ ಸಚಿವ ಅಮಿತ್ ಶಾ ಅವರು ಲ್ಯಾಂಡ್ ಆಗಲಿದ್ದ ಕಾರಣ ನನ್ನ ಹೆಲಿಕಾಪ್ಟರ್ 20 ನಿಮಿಷ ತಡವಾಯಿತು. ಇಬ್ಬರದ್ದೂ ಪ್ರತ್ಯೇಕ ಮಾರ್ಗವಾಗಿದ್ದರೂ ನನಗೆ ವಿಳಂಬ ಮಾಡಲಾಯಿತು. ಅಲ್ಲದೆ ವಿಮಾನ ನಿಲ್ದಾಣದಲ್ಲಿ ಕಾಯ್ದಿರಿಸಿದ ವಿಶ್ರಾಂತಿ ಕೊಠಡಿ ಪ್ರವೇಶಿಸಲು ಅವಕಾಶ ನಿರಾಕರಿಸಲಾಯಿತು. ಅದನ್ನು ಪ್ರಧಾನಿ ಅವರಿಗಾಗಿ ಕಾಯ್ದಿರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು. ಪ್ರಧಾನಿ ಅವರಿಗಾಗಿ ಒಂದು ಶೌಚಾಲಯವನ್ನು ಮೀಸಲಿಡಬಹುದೇ ಎಂದು ನಾನು ಅವರನ್ನು ಕೇಳ ಬಯಸುತ್ತೇನೆ’ ಎಂದು ಅವರು ವಿಮಾನ ನಿಲ್ದಾಣದ ಹೆಸರನ್ನು ಉಲ್ಲೇಖಿಸಿದೆ ಟೀಕಿಸಿದರು.
‘ಇಂಡಿಯಾ’ ಒಕ್ಕೂಟದ ಪಕ್ಷಗಳು ಜಾರ್ಖಂಡ್‌ನಲ್ಲಿ ಬಾಂಗ್ಲಾದೇಶಿ ನುಸುಳುಕೋರರಿಗೆ ಅವಕಾಶ ಕಲ್ಪಿಸುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ. ಹಾಗಾದರೆ ಮೋದಿ ಮತ್ತು ಅಮಿತ್ ಶಾ ಅವರೇನು ನಿದ್ದೆ ಮಾಡುತ್ತಿದ್ದಾರಾ? ಅಧಿಕಾರದಲ್ಲಿರುವ ಅವರು ನುಸುಳುಕೋರರನ್ನು ಏಕೆ ಪರಿಶೀಲಿಸುತ್ತಿಲ್ಲ? ಹೆಲಿಕಾಪ್ಟರ್ ಅನ್ನು ತಡೆಯಬಹುದಾದ ಅವರಿಗೆ, ನುಸುಳುಕೋರರನ್ನು ತಡೆಯಲು ಏಕೆ ಸಾಧ್ಯವಾಗುತ್ತಿಲ್ಲ’ ಎಂದು ಖರ್ಗೆ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.