ಬಂದಾರ್ ಸೆರಿ ಬೆಗಾವನ್: ವ್ಯಾಪಾರ ಮತ್ತು ಸಾಂಸ್ಕೃತಿಕ ಕ್ಷೇತ್ರ ಒಳಗೊಂಡಂತೆ ಬ್ರೂನೈ ಜತೆ ನಿಕಟ ಸಂಬಂಧವನ್ನು ಎದುರು ನೋಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆಗಾಗಿ ಮೋದಿ ಅವರು ಮಂಗಳವಾರ ಬ್ರೂನೈಗೆ ಬಂದಿಳಿದರು.
ಭಾರತದ ಪ್ರಧಾನಿಯೊಬ್ಬರು ದ್ವಿಪಕ್ಷೀಯ ಮಾತುಕತೆಗಾಗಿ ಬ್ರೂನೈಗೆ ಭೇಟಿ ನೀಡಿದ್ದು ಇದೇ ಮೊದಲು. ಬ್ರೂನೈ ರಾಜಕುಮಾರ ಅಲ್ ಮುಹ್ತದೀ ಬಿಲಾ ಅವರು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಅವರನ್ನು ಬರಮಾಡಿಕೊಂಡರು.
ವಿಮಾನ ನಿಲ್ದಾಣದಿಂದ ತಾವು ವಾಸ್ತವ್ಯ ಹೂಡಲಿರುವ ಹೋಟೆಲ್‌ಗೆ ತೆರಳಿದ ಪ್ರಧಾನಿ ಅವರನ್ನು ಭಾರತೀಯ ಸಮುದಾಯದ ಸದಸ್ಯರು ಸ್ವಾಗತಿಸಿದರು. ಭಾರತೀಯ ಸಮುದಾಯದ ಸದಸ್ಯರ ಜತೆ ಅವರು ಮಾತುಕತೆ ನಡೆಸಿದರು. ಮೋದಿ ಅವರು ಬ್ರೂನೈ ದೊರೆ ಮತ್ತು ಪ್ರಧಾನಿ ಹಸನಲ್ ಬೊಲ್ಕಿಯಾ ಹಾಗೂ ರಾಜಕುಟುಂಬದ ಇತರ ಸದಸ್ಯರ ಜತೆ ಮಾತುಕತೆ ನಡೆಸಲಿದ್ದಾರೆ.
‘ಬ್ರೂನೈಗೆ ಭಾರತದ ಪ್ರಧಾನಿಯ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಉಭಯ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 40ನೇ ವರ್ಷಾಚರಣೆಯ ಸಮಯದಲ್ಲೇ ಈ ಭೇಟಿ ನಡೆದಿದೆ’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ‘ಎಕ್ಸ್’ನಲ್ಲಿ ಹೇಳಿದ್ದಾರೆ.
‘ಎರಡೂ ದೇಶಗಳ ನಡುವಣ ಐತಿಹಾಸಿಕ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಬ್ರೂನೈ ದೊರೆ ಹಸನಲ್ ಬೊಲ್ಕಿಯಾ ಹಾಗೂ ರಾಜ ಕುಟುಂಬದ ಇತರ ಸದಸ್ಯರ ಜತೆಗಿನ ಮಾತುಕತೆಯನ್ನು ಎದುರು ನೋಡುತ್ತಿದ್ದೇನೆ’ ಎಂದು ಪ್ರಧಾನಿ ಅವರು ನವದೆಹಲಿಯಲ್ಲಿ ವಿಮಾನವೇರುವ ಮುನ್ನ ತಿಳಿಸಿದ್ದಾರೆ.
ಈ ಭೇಟಿಯು ರಕ್ಷಣಾ ಸಹಕಾರ, ವ್ಯಾಪಾರ ಮತ್ತು ಹೂಡಿಕೆ, ಇಂಧನ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ–ಬ್ರೂನೈ ನಡುವಣ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿದೆ. ಸಹಕಾರವನ್ನು ಹೊಸ ಕ್ಷೇತ್ರಗಳಿಗೆ ವಿಸ್ತರಿಸುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ಹೇಳಿದೆ.
ಪ್ರಧಾನಿ ಅವರು ಬ್ರೂನೈನಿಂದ ಬುಧವಾರ ಸಿಂಗಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಅವರು ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ, ಪ್ರಧಾನಿ ಲಾರೆನ್ಸ್ ವಾಂಗ್ ಹಾಗೂ ಸರ್ಕಾರದ ಹಿರಿಯ ಸಚಿವರ ಜತೆ ಮಾತುಕತೆ ನಡೆಸಲಿದ್ದಾರೆ.
ಪ್ರಧಾನಿಗೆ ಬ್ರೂನೈನಲ್ಲಿ ಸಾಂಪ್ರದಾಯಿಕ ಸ್ವಾಗತ ಭಾರತೀಯ ಸಮುದಾಯದ ಸದಸ್ಯರ ಜತೆ ಮಾತುಕತೆ ಬುಧವಾರ ಸಿಂಗಪುರಕ್ಕೆ ಪ್ರಯಾಣಿಸಲಿರುವ ಮೋದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.