ADVERTISEMENT

ವಾರಾಣಸಿ ಲೋಕಸಭೆ | ಮೋದಿ ನಾಮಪತ್ರ; ಎನ್‌ಡಿಎ ಬಲ ಪ್ರದರ್ಶನ

ಪಿಟಿಐ
Published 14 ಮೇ 2024, 7:05 IST
Last Updated 14 ಮೇ 2024, 7:05 IST
   

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ಎನ್‌ಡಿಎ ಕೂಟದ ಹಲವು ಮುಖಂಡರು, ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡು ಶಕ್ತಿ ಪ್ರದರ್ಶನ ನಡೆಸಿದರು.

‘ಕಾಶಿಯೊಂದಿಗಿನ ನನ್ನ ಸಂಬಂಧವು ಅದ್ಭುತವಾದದ್ದು, ಬೇರ್ಪಡಿಸಲಾಗದಂಥದ್ದು ಮತ್ತು ಹೋಲಿಕೆಗೆ ನಿಲುಕದ್ದು’ ಎಂದು ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆಗೂ ಮುನ್ನ ‘ಎಕ್ಸ್‌’ ನಲ್ಲಿ ಪೋಸ್ಟ್ ಮಾಡಿದ್ದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಹರ್‌ದೀಪ್‌ ಸಿಂಗ್ ಪುರಿ, ಅನುಪ್ರಿಯಾ ಪಟೇಲ್ ಸೇರಿದಂತೆ ಹಲವರು ಪ್ರಧಾನಿ ಮೋದಿ ಜತೆಗೂಡಿದ್ದರು. ಅನಾರೋಗ್ಯದ ಕಾರಣ ನೀಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೈರಾಗಿದ್ದರು.

ADVERTISEMENT

ಬಿಳಿ ಕುರ್ತಾ ಪೈಜಾಮಾ ಮತ್ತು ನೀಲಿ ಮೇಲಂಗಿ ಧರಿಸಿದ್ದ ಪ್ರಧಾನಿ ಮೋದಿ, ವಾರಾಣಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಬರುವ ಹೊತ್ತಿಗೆ ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಪ್ರಧಾನಿ ಅವರತ್ತ ಕೈ ಬೀಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, ಎನ್‌ಸಿಪಿ ಮುಖಂಡ ಪ್ರಫುಲ್ ಪಟೇಲ್, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ಹಿಂದೂಸ್ಥಾನ್ ಅವಾಮಿ ಮೋರ್ಚಾ (ಜಾತ್ಯತೀತ) ಸ್ಥಾಪಕ ಜಿತನ್ ರಾಮ್ ಮಾಂಝಿ, ರಾಷ್ಟ್ರೀಯ ಲೋಕ ಮೋರ್ಚಾ ಮುಖ್ಯಸ್ಥ ಉಪೇಂದ್ರ ಕುಶ್ವಾಹ, ಉತ್ತರ ‍ಪ್ರದೇಶದ ಸಚಿವ ಸಂಜಯ್ ನಿಶಾದ್, ಓಂಪ್ರಕಾಶ್ ರಾಜ್‌ಭರ್, ಜಯಂತ್ ಚೌಧರಿ, ಚಿರಾಗ್ ಪಾಸ್ವಾನ್, ಅನ್ಬುಮಣಿ ರಾಮದಾಸ್, ಜಿ.ಕೆ.ವಾಸನ್, ದೇವನಾಥನ್ ಯಾದವ್ ಅವರು ಜಿಲ್ಲಾಧಿಕಾರಿ ಕಚೇರಿ ಬಳಿ ನೆರೆದಿದ್ದರು.

ನಾಮಪತ್ರ ಸಲ್ಲಿಕೆಯ ನಂತರ ಪ್ರಧಾನಿ ಮೋದಿ ಅವರು ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದರು.

ಗಂಗಾ ಆರತಿ ನೆರವೇರಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾ ನದಿಯ ದಡದಲ್ಲಿರುವ ದಶಾಶ್ವಮೇಧ ಘಾಟ್‌ನಲ್ಲಿ ಪೂಜೆ ಸಲ್ಲಿಸಿದರು. ವೇದಮಂತ್ರಗಳ ಪಠಣದ ನಡುವೆ ಅವರು ಘಾಟ್‌ನಲ್ಲಿ ಗಂಗಾ ಆರತಿ ನೆರವೇರಿಸಿದರು.  ದಶಾಶ್ವಮೇಧ ಘಾಟ್‌ನಿಂದ ಅವರು ಕ್ರೂಸ್‌ನಲ್ಲಿ ನಮೋ ಘಾಟ್‌ಗೆ ಪ್ರಯಾಣಿಸಿದರು. ನಂತರ ಕಾಲಭೈರವ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಯೋಗಿ ಆದಿತ್ಯನಾಥ ಅವರು ಪ್ರಧಾನಿ ಜತೆಗಿದ್ದರು

ಮುಹೂರ್ತ ನಿಗದಿ ಮಾಡಿದ್ದ ಶಾಸ್ತ್ರಿ

ಭಾಗಿ ಪಂಡಿತ್ ಜ್ಞಾನೇಶ್ವರ್ ಶಾಸ್ತ್ರಿ ಆರ್‌ಎಸ್‌ಎಸ್‌ ಮುಖಂಡ ಬೈಜನಾಥ ಪಟೇಲ್ ಲಾಲ್‌ಚಂದ್ ಕುಶ್ವಾಹ ಮತ್ತು ಸಂಜಯ್ ಸೋನ್‌ಕರ್ ಅವರು ಪ್ರಧಾನಿಯ ನಾಮಪತ್ರಕ್ಕೆ ಸೂಚಕರಾಗಿದ್ದಾರೆ ಎಂದು ವಾರಾಣಸಿ ಜಿಲ್ಲಾ ಬಿಜೆಪಿ ಘಟಕದ ಮಾಧ್ಯಮ ಸಹ ಉಸ್ತುವಾರಿ ಅರವಿಂದ ಮಿಶ್ರಾ ಹೇಳಿದ್ದಾರೆ.  ಇವರ ಪೈಕಿ ಶಾಸ್ತ್ರಿ ಅಯೋಧ್ಯೆಯ ಬಾಲರಾಮನ ಪ್ರಾಣ‍ ಪ್ರತಿಷ್ಠಾಪನೆಗೆ ಮುಹೂರ್ತ ನಿಗದಿ ಮಾಡಿದವರಾದರೆ ಲಾಲ್‌ಚಂದ್ ಕುಶ್ವಾಹ ಒಬಿಸಿ ಮುಖಂಡರಾಗಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಸಂಜಯ್ ಸೋನ್‌ಕರ್ ವಾರಾಣಸಿ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಸೂಚಕರ ಪೈಕಿ ಶಾಸ್ತ್ರಿ ಮತ್ತು ಪಟೇಲ್ ನಾಮಪತ್ರ ಸಲ್ಲಿಕೆಯ ವೇಳೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.