ನವದೆಹಲಿ: ವಿಶ್ವದ ಅತ್ಯಂತ ಉದ್ದದ ನದಿ ವಿಹಾರದ ದೋಣಿ ‘ಎಂವಿ ಗಂಗಾ ವಿಲಾಸ್’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹಸಿರು ನಿಶಾನೆ ತೋರಿದರು.
ವರ್ಚುವಲ್ ವಿಧಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೋಣಿಗೆ ಚಾಲನೆ ನೀಡಿದರು.
ಗಂಗಾ ನದಿಯಲ್ಲಿ ಕ್ರೂಸ್ ಸೇವೆ ಆರಂಭವಾಗುತ್ತಿರುವುದು ಒಂದು ಐತಿಹಾಸಿಕ ಕ್ಷಣ. ಇದು ಭಾರತದಲ್ಲಿ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂದು ಮೋದಿ ಹೇಳಿದರು.
ವಿದೇಶಿ ಪ್ರವಾಸಿಗರು ಈ ಸೇವೆ ಪಡೆಯುವ ಮೂಲಕ ಭಾರತದ ವೈಭವವನ್ನು ಆಸ್ವಾದಿಸಬೇಕು ಎಂದು ಮೋದಿ ಆಹ್ವಾನ ನೀಡಿದರು.
‘ಗಂಗಾ ವಿಲಾಸ’ದ ಮೂಲಕ ನದಿ ವಿಹಾರ ಪ್ರವಾಸೋದ್ಯಮ ಉತ್ತೇಜನಗೊಳ್ಳಲಿದೆ. ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಯಾಗಲಿದೆ ಎಂದು ಮೋದಿ ಹೇಳಿದರು.
ದೇಶದ ವಿವಿಧ ಭಾಗಗಳಲ್ಲೂ ಹೆಚ್ಚಿನ ನದಿ ವಿಹಾರ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಇದೇ ವೇಳೆ ಹೇಳಿದರು.
ಇದಕ್ಕೂ ಮುನ್ನ, ವಾರಾಣಸಿಯಲ್ಲಿ ಗಂಗಾ ನದಿ ತೀರದಲ್ಲಿ ನಿರ್ಮಿಸಲಾಗಿರುವ ‘ಟೆಂಟ್ ಸಿಟಿ’ಯನ್ನೂ ಪ್ರಧಾನಿ ಉದ್ಘಾಟಿಸಿದರು.
ಇದೇ ವೇಳೆ, ₹1,000 ಕೋಟಿಗೂ ಅಧಿಕ ವೆಚ್ಚದ ವಿವಿಧ ಜಲಸಾರಿಗೆ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಎಂವಿ ಗಂಗಾ ವಿಲಾಸದ ವಿಶೇಷತೆ
– ವಾರಾಣಸಿಯಿಂದ ತನ್ನ ಯಾತ್ರೆಯನ್ನು ಆರಂಭಿಸುವ ‘ಎಂವಿ ಗಂಗಾ ವಿಲಾಸ್’, ಬಾಂಗ್ಲಾದೇಶದ ಮೂಲಕ ಸಾಗಿ 51 ದಿನಗಳ ಬಳಿಕ ಅಸ್ಸಾಂನ ದಿಬ್ರೂಗಢ ತಲುಪಲಿದೆ.
– ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಾಂಗ್ಲಾದೇಶದ ಢಾಕಾ ತಲುಪಲಿರುವ ಕ್ರೂಸ್ ಒಟ್ಟು 3,200 ಕಿ.ಮೀಗಳನ್ನು ಕ್ರಮಿಸಲಿದೆ.
– ಮಾರ್ಗ ಮಧ್ಯೆ, ಪಾರಂಪರಿಕ ಸ್ಥಳಗಳು, ರಾಷ್ಟ್ರೀಯ ಉದ್ಯಾನಗಳು, ಘಾಟ್‌ಗಳು ಹಾಗೂ ಪ್ರಮುಖ ನಗರಗಳು ಸೇರಿದಂತೆ ಒಟ್ಟು 50 ಪ್ರವಾಸಿ ತಾಣಗಳಿಗೆ ಕ್ರೂಸ್ ಭೇಟಿ ನೀಡಲಿದೆ.
– ಈ ಯಾತ್ರೆಯು ಪ್ರವಾಸಿಗರಿಗೆ ಭಾರತ ಹಾಗೂ ಬಾಂಗ್ಲಾದೇಶದ ಕಲೆ, ಸಂಸ್ಕೃತಿ, ಇತಿಹಾಸ ಹಾಗೂ ಅಧ್ಯಾತ್ಮ ಕುರಿತು ಮಾಹಿತಿ ಒದಗಿಸಲಿದೆ
– ಅಂಟಾರಾ ಕ್ರೂಸಸ್ ಸಂಸ್ಥೆ ‘ಎಂವಿ ಗಂಗಾ ವಿಲಾಸ್’ ಕ್ರೂಸ್ ಅನ್ನು ನಿರ್ವಹಿಸುತ್ತದೆ.
– ಮೂರು ಡೆಕ್‌ಗಳನ್ನು ಹೊಂದಿರುವ ಹಡಗು 62 ಮೀಟರ್ ಉದ್ದ, 12 ಮೀಟರ್ ಆಗಲವಿದೆ.
– ತನ್ನ ಯಾನದಲ್ಲಿ ಕ್ರೂಸ್ ಒಟ್ಟು 27 ನದಿ ವ್ಯವಸ್ಥೆಗಳನ್ನು ದಾಟಲಿದೆ.
– ಎಲ್ಲಾ ಬಗೆಯ ಐಷಾರಾಮಿ ಸೌಕರ್ಯಗಳನ್ನು ಹೊಂದಿರುವ ಕ್ರೂಸ್, 36 ಪ್ರವಾಸಿಗರ ಸಾಮರ್ಥ್ಯವನ್ನು ಹೊಂದಿದೆ. 18 ಸೂಟ್‌ಗಳನ್ನು ಹೊಂದಿದೆ. ಸೂಟ್‌ಗಳು ಹಿತವಾದ ಒಳಾಂಗಣಗಳನ್ನು ಹೊಂದಿದ್ದು, ಫ್ರೆಂಚ್ ಬಾಲ್ಕನಿಗಳು, ಎಲ್‌ಇಡಿ ಟಿವಿಗಳು, ಸ್ಮೋಕ್ ಡಿಟೆಕ್ಟರ್‌ಗಳು ಮತ್ತು ಐಷಾರಾಮಿ ಬೆಡ್‌ಗಳಂತಹ ಹಲವಾರು ಸೌಕರ್ಯಗಳಿವೆ.
– ಕ್ರೂಸ್‌ನ ಮುಖ್ಯ ಡೆಕ್‌ನಲ್ಲಿ 40 ಆಸನಗಳ ರೆಸ್ಟೋರೆಂಟ್, ಸ್ಪಾ ಮತ್ತು ಸನ್ ಡೆಕ್ ಅನ್ನು ಒಳಗೊಂಡಿದೆ. ಮೇಲಿನ ಡೆಕ್‌ನಲ್ಲಿ ಬಾರ್ ಕೂಡ ಇದೆ.
– ಸ್ವಿಟ್ಜರ್ಲೆಂಡ್‌ನ 32 ಪ್ರವಾಸಿಗರು ಇದರ ಮೊದಲ ಪ್ರಯಾಣದ ಲಾಭ ಪಡೆದುಕೊಂಡಿದ್ದಾರೆ.
– ಕ್ರೂಸ್ ಜನವರಿ 6 ರಂದು ವಾರಣಾಸಿ ತಲುಪಬೇಕಿತ್ತು ಆದರೆ ಹವಾಮಾನ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಜನವರಿ 8 ರಂದು ವಾರಾಣಸಿಯಿಂದ 65 ಕಿಮೀ ದೂರದಲ್ಲಿರುವ ಗಾಜಿಪುರಕ್ಕೆ ಆಗಮಿಸಿದೆ.
– ಈ ಐಷಾರಾಮಿ ಹಡಗಿನಲ್ಲಿ ಪ್ರವಾಸ ಕೈಗೊಳ್ಳಲು ಪ್ರವಾಸಿಗರು ದಿನವೊಂದಕ್ಕೆ ₹25,000 ರಿಂದ ₹50,000 ಪಾವತಿಸಬೇಕು. 51 ದಿನಗಳ ಪ್ರಯಾಣದ ಒಟ್ಟು ವೆಚ್ಚ ಪ್ರತಿ ಪ್ರಯಾಣಿಕರಿಗೆ ಸುಮಾರು ₹20 ಲಕ್ಷ ಆಗಲಿದೆ. ಭಾರತೀಯರು ಮತ್ತು ವಿದೇಶಿಯರೆಲ್ಲರಿಗೂ ಒಂದೇ ಬಗೆಯ ಶುಲ್ಕ ವಿಧಿಸಲಾಗುತ್ತದೆ ಎಂದು ಕ್ರೂಸ್‌ನ ನಿರ್ದೇಶಕ ರಾಜ್ ಸಿಂಗ್ ಹೇಳಿದ್ದಾರೆ.
– ಕ್ರೂಸ್‌ನಲ್ಲಿ ಒಳಚರಂಡಿ ಸಂಸ್ಕರಣಾ ಘಟಕವೂ ಇದ್ದು, ಮಲಿನ ನೀರನ್ನು ಸಂಸ್ಕರಿಸಿ ನದಿಗೆ ಬಿಡಲಾಗುತ್ತದೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.