ADVERTISEMENT

ಮೈಸೂರಿಗೂ ಬೆಂಗಳೂರು ಮಾದರಿಯ ಮೆಟ್ರೊ ರೈಲು: ಪ್ರಧಾನಿ ನರೇಂದ್ರ ಮೋದಿ ಸುಳಿವು

ಪಿಟಿಐ
Published 20 ಅಕ್ಟೋಬರ್ 2023, 13:28 IST
Last Updated 20 ಅಕ್ಟೋಬರ್ 2023, 13:28 IST
<div class="paragraphs"><p>ಉತ್ತರ ಪ್ರದೇಶದ ಸಾಹಿಬಾಬಾದ್ ರಾಪಿಡ್ಎಕ್ಸ್ ನಿಲ್ದಾಣದಲ್ಲಿ ದೆಹಲಿ-ಗಾಜಿಯಾಬಾದ್-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್​ಆರ್​ಟಿಎಸ್) ಕಾರಿಡಾರ್‌ಗೆ ಚಾಲನೆ ನೀಡಿದ ನಂತರ ರೈಲ್ವೆ ಸಿಬ್ಬಂದಿ ನರೇಂದ್ರ ಮೋದಿ ಅವರಿಗೆ ವಂದಿಸಿದರು. ಯೋಗಿ ಆದಿತ್ಯನಾಥ್ ಇದ್ದಾರೆ.</p></div>

ಉತ್ತರ ಪ್ರದೇಶದ ಸಾಹಿಬಾಬಾದ್ ರಾಪಿಡ್ಎಕ್ಸ್ ನಿಲ್ದಾಣದಲ್ಲಿ ದೆಹಲಿ-ಗಾಜಿಯಾಬಾದ್-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್​ಆರ್​ಟಿಎಸ್) ಕಾರಿಡಾರ್‌ಗೆ ಚಾಲನೆ ನೀಡಿದ ನಂತರ ರೈಲ್ವೆ ಸಿಬ್ಬಂದಿ ನರೇಂದ್ರ ಮೋದಿ ಅವರಿಗೆ ವಂದಿಸಿದರು. ಯೋಗಿ ಆದಿತ್ಯನಾಥ್ ಇದ್ದಾರೆ.

   

ಪಿಟಿಐ ಚಿತ್ರ

ಬೆಂಗಳೂರು: ‘ಬೆಂಗಳೂರಿನಲ್ಲಿ ಇರುವಂತೆಯೇ ಮೆಟ್ರೊ ರೈಲು ಸೇವೆಯನ್ನು ಭವಿಷ್ಯದಲ್ಲಿ ಮೈಸೂರು ಹಾಗೂ ಕರ್ನಾಟಕದ ಇತರ ಪ್ರಮುಖ ನಗರಗಳಲ್ಲೂ ಆರಂಭಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ADVERTISEMENT

ಆನ್‌ಲೈನ್ ವೇದಿಕೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬೈಯಪ್ಪನಹಳ್ಳಿ–ಕೃಷ್ಣರಾಜಪುರ ಹಾಗೂ ಕೆಂಗೇರಿ–ಚಲ್ಲಘಟ್ಟ ವಿಸ್ತರಿತ ಮಾರ್ಗವನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಉತ್ತರ ಪ್ರದೇಶದ ನೋಯ್ಡಾ, ಗಾಜಿಯಾಬಾದ್, ಲಖನೌ, ಮೀರತ್‌, ಆಗ್ರಾ ಮತ್ತು ಕಾನ್ಪುರದಲ್ಲಿ ಮೆಟ್ರೊ ರೈಲುಗಳ ಕಾರ್ಯಾಚರಣೆ ಆರಂಭಗೊಂಡಿದೆ. ಭವಿಷ್ಯದಲ್ಲಿ ಕರ್ನಾಟಕದಲ್ಲಿ ಮೈಸೂರು ಸೇರಿದಂತೆ ವಿವಿಧ ನಗರಗಳಲ್ಲೂ ಮೆಟ್ರೊ ಸೇವೆ ಆರಂಭವಾಗಲಿದೆ’ ಎಂದು ಹೇಳುವ ಮೂಲಕ ಮೈಸೂರಿನಲ್ಲಿ ಮೆಟ್ರೊ ಸೇವೆ ಆರಂಭಿಸುವ ಸುಳಿವು ನೀಡಿದರು.

‘ನಮ್ಮ ಮೆಟ್ರೊ ರೈಲಿನಲ್ಲಿ ನಿತ್ಯ 8 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ನೂತನ ವಿಸ್ತರಿತ ಮಾರ್ಗಗಳು ಬೆಂಗಳೂರಿನ ಪೂರ್ವ ಹಾಗೂ ಪಶ್ಚಿಮದ ಕಾರಿಡಾರ್‌ಗಳನ್ನು ಸಂಪರ್ಕಿಸಿದೆ. ಇದಕ್ಕಾಗಿ ಕರ್ನಾಟಕದ ಜನತೆಗೆ ಅಭಿನಂದನೆಗಳು’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘2031ರ ಹೊತ್ತಿಗೆ ಸಮಗ್ರ ಸಂಚಾರ ಯೋಜನೆ (ಸಿಎಂಪಿ) ಅಡಿಯಲ್ಲಿ 317 ಕಿ.ಮೀ. ಉದ್ದದ ಮೆಟ್ರೊ ರೈಲು ಸಂಪರ್ಕ ಜಾಲಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇದರಲ್ಲಿ 219 ಕಿ.ಮೀ. ಉದ್ದದ ಮಾರ್ಗದ ನಿರ್ಮಾಣ ಹಾಗೂ ಯೋಜನೆ ಪ್ರಗತಿಯಲ್ಲಿದೆ’ ಎಂದರು.

‘ಬೆಂಗಳೂರು ಮೆಟ್ರೊ ರೈಲು ಯೋಜನೆಯ 2ನೇ ಹಂತದಲ್ಲಿ 75.06 ಕಿ.ಮೀ. ಉದ್ದದ ಮಾರ್ಗವನ್ನು ₹30,695 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ಈಗಾಗಲೇ 32 ಕಿ.ಮೀ. ಉದ್ದದ ಮಾರ್ಗ ಪೂರ್ಣಗೊಂಡಿದೆ. ಈ ಎರಡೂ ಮಾರ್ಗಗಳು ಅಧಿಕೃತವಾಗಿ ಉದ್ಘಾಟನೆಗೊಂಡಿದ್ದು, ಕಾರ್ಯಾಚರಣೆಯೂ ನಡೆಸುತ್ತಿದೆ’ ಎಂದರು.

‘ಉತ್ತರ ದಿಕ್ಕಿನಲ್ಲಿನ ನಾಗಸಂದ್ರ–ಮಾದಾವರ ಮೆಟ್ರೊ ವಿಸ್ತರಿತ ಮಾರ್ಗದಲ್ಲಿ 3.14 ಕಿ.ಮೀ. ಹಾಗೂ ಆರ್‌.ವಿ.ರಸ್ತೆ–ಬೊಮ್ಮಸಂದ್ರ ಮಾರ್ಗದಲ್ಲಿ 19.15 ಕಿ.ಮೀ. ಹೊಸ ಮಾರ್ಗ ಪೂರ್ಣಗೊಳ್ಳುವ ಹಂತದಲ್ಲಿದೆ. ಇದು 2024ರ ಏಪ್ರಿಲ್ ಹೊತ್ತಿಗೆ ಪೂರ್ಣಗೊಳ್ಳಲಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

ವರ್ಚುವಲ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಡಿ.ಕೆ.ಶಿವಕುಮಾರ್

21.26 ಕಿ.ಮೀ. ಉದ್ದದ ಕಾಳೇನ ಅಗ್ರಹಾರ–ನಾಗವಾರ ಮಾರ್ಗವು 2025ರ ಮಾರ್ಚ್‌ ಹೊತ್ತಿಗೆ ಪೂರ್ಣಗೊಳ್ಳಲಿದೆ. ಈ ಮಾರ್ಗದ ಕಾಮಗಾರಿ ಪೂರ್ಣಗೊಂಡ ಬಳಿಕ ಮೆಟ್ರೊ ರೈಲು ಮಾರ್ಗದ ಒಟ್ಟು ಉದ್ದ 117 ಕಿ.ಮೀ. ಆಗಲಿದೆ. ಇದರಿಂದ 12 ಲಕ್ಷ ಜನರಿಗೆ ನೆರವಾಗಲಿದೆ. ಈ ಯೋಜನೆಗಾಗಿ ಈಗಾಗಲೇ ₹11,583 ಕೋಟಿ ಅನುದಾನವನ್ನು ರಾಜ್ಯ ಸರ್ಕಾರವು ಬಿಡಗುಡೆ ಮಾಡಿದೆ’ ಎಂದು ತಿಳಿಸಿದರು.

ರೇಷ್ಮೆ ಮಂಡಳಿ–ಹೆಬ್ಬಾಳ ಜಂಕ್ಷನ್‌ವರೆಗಿನ ಒಆರ್‌ಆರ್–ವಿಮಾನ ನಿಲ್ದಾಣ ಮೆಟ್ರೊ ರೈಲಿನ 2ಎ ಮತ್ತು 2ಬಿಯ 58 ಕಿ.ಮೀ. ಮಾರ್ಗವನ್ನು ₹14,788 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ಈಗಾಗಲೇ ₹4,775 ಕೋಟಿ ಬಿಡುಗಡೆ ಮಾಡಲಾಗಿದೆ. 2026ರ ಹೊತ್ತಿಗೆ ಈ ಮಾರ್ಗ ಸಿದ್ಧಗೊಳ್ಳಲಿದೆ. ಈ ಮಾರ್ಗದ ಕಾರ್ಯಾಚರಣೆ ಮೂಲಕ ಮೆಟ್ರೊ ರೈಲು ಸಂಪರ್ಕ ಜಾಲದ ಒಟ್ಟು ಉದ್ದ 176 ಕಿ.ಮೀ. ಆಗಲಿದೆ. 20 ಲಕ್ಷ ಜನರಿಗೆ ಪ್ರಯೋಜನವಾಗಲಿದೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

‘ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಮೂರನೇ ಹಂತದ ಮೆಟ್ರೊ ರೈಲು ಯೋಜನೆಗೆ ಕರ್ನಾಟಕ ಸರ್ಕಾರವು ವಿಸ್ತೃತ ಯೋಜನಾ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದೆ. ಇದರ ಒಟ್ಟು ಉದ್ದ 45 ಕಿ.ಮೀ. ಆಗಲಿದ್ದು, ಯೋಜನಾ ವೆಚ್ಚ ₹15,611 ಕೋಟಿ ಆಗಲಿದೆ. ರಾಜ್ಯದ ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ತ್ವರಿತವಾಗಿ ಅನುಮೋದನೆ ನೀಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮುಖ್ಯಮಂತ್ರಿ ಮನವಿ ಮಾಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ದೇಶದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸುಗಮ ಸಂಚಾರವೇ ದೊಡ್ಡ ಸಮಸ್ಯೆ. ಈ ನಿಟ್ಟಿನಲ್ಲಿ ಮೆಟ್ರೊ ರೈಲು ಸೇವೆಯ ವಿಸ್ತರಣೆ ಅತ್ಯಗತ್ಯ’ ಎಂದು ಅಭಿಪ್ರಾಯಪಟ್ಟರು.

ಬೈಯಪ್ಪನಹಳ್ಳಿ–ಕೃಷ್ಣರಾಜಪುರ ಹಾಗು ಕೆಂಗೇರಿ–ಚಲ್ಲಘಟ್ಟ ವಿಸ್ತರಿತ ಮಾರ್ಗವು ಅ. 9ರಿಂದ ತನ್ನ ಕಾರ್ಯಾಚರಣೆ ಆರಂಭಿಸಿತ್ತು. ಇಂದು (ಶುಕ್ರವಾರ) ಅಧಿಕೃತವಾಗಿ ಪ್ರಧಾನಿ ಚಾಲನೆ ನೀಡಿದರು. 12 ವರ್ಷಗಳ ಹಿಂದೆ ಆರಂಭವಾದ ನಮ್ಮ ಮೆಟ್ರೊದ ಈ ವಿಸ್ತರಿತ ಮಾರ್ಗದಿಂದಾಗಿ ನಮ್ಮ ಮೆಟ್ರೊ ಕಾರ್ಯಾಚರಣೆ 74 ಕಿ.ಮೀ.ಗೆ ವಿಸ್ತರಣೆಗೊಂಡಿದೆ. ಒಟ್ಟು 66 ನಿಲ್ದಾಣಗಳು ಈ ಮಾರ್ಗಗಳಲ್ಲಿ ಇವೆ. 

ಪೂರ್ವ ಹಾಗೂ ಪಶ್ಚಿಮ ಕಾರಿಡಾರ್‌ನ ನೇರಳೆ ಮಾರ್ಗದಲ್ಲಿ ವೈಟ್‌ಫೀಲ್ಡ್‌–ಚಲ್ಲಘಟ್ಟ ಮಾರ್ಗದಲ್ಲಿ 43.49 ಕಿ.ಮೀ. ಲೇನ್‌ನಲ್ಲಿ 37 ನಿಲ್ದಾಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.