ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನಲ್ಲಿ ಭಾರತ –ಆಸ್ಟ್ರೇಲಿಯಾ ನಡುವೆ ಭಾನುವಾರ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಿದ್ದರು.
ಇದೇ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಪ್ರಧಾನಿ ಮೋದಿ ಅವರು ಬಿಡುವು ಮಾಡಿಕೊಂಡು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿದ್ದಾರೆ. ಆದರೆ, ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಲು ಅವರಿಗೆ ಸಮಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಪ್ರಧಾನಿ ಮೋದಿ ಅಹಮದಾಬಾದ್‌ನಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಿಡುವು ಮಾಡಿಕೊಂಡರು. ನಾಳೆಯಿಂದ ಅವರು ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಅನ್ನು ನಿಂದಿಸಲು ತೊಡಗುತ್ತಾರೆ. ಆದರೆ, ಉದ್ವಿಗ್ನತೆಯಿಂದ ಕೂಡಿರುವ ಮಣಿಪುರಕ್ಕೆ ಭೇಟಿ ನೀಡುವುದು ಸೂಕ್ತ ಎಂಬುದನ್ನು ಅವರು ತಿಳಿದುಕೊಂಡಿಲ್ಲ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಮೋದಿಯವರ ಆದ್ಯತೆ ಏನೆಂಬುದು ಸ್ಪಷ್ಟವಾಗುತ್ತದೆ’ ಎಂದು ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಣಿಪುರದಲ್ಲಿ ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದ ಬಳಿಕ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.