ಜೈಪುರ: ದೆಹಲಿಯಲ್ಲಿ ಶುಕ್ರವಾರ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಗುರುವಾರ ಗುಲಾಬಿ ನಗರ ಜೈಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರೋಡ್ ಶೋನಲ್ಲಿ ಭಾಗವಹಿಸಿದರು. ಈ ಮೂಲಕ ಮ್ಯಾಕ್ರನ್ ಅವರು ಪಿಂಕ್ ಸಿಟಿಯ ಇತಿಹಾಸ, ಕಲೆ, ಸಂಸ್ಕೃತಿಯನ್ನು ತಿಳಿದುಕೊಂಡರು.
ಇದಕ್ಕೂ ಮುನ್ನಾ ಇಲ್ಲಿನ ಜಂತರ್ ಮಂತರ್‌ನಲ್ಲಿ ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಪರಸ್ಪರ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.
ಬಳಿಕ ಜಂತರ್ ಮಂತರ್‌ನಿಂದ ತೆರೆದ ವಾಹನದಲ್ಲಿ, ಬಿಗಿ ಭದ್ರತೆಯ ನಡುವೆ ಸಾಗಿದ ಇಬ್ಬರೂ ನಾಯಕರು, ರಸ್ತೆ ಬದಿಯಲ್ಲಿ ನೆರೆದಿದ್ದ ಜನರತ್ತ ಕೈಬೀಸಿದರು. ರಸ್ತೆಗಳ ಇಕ್ಕೆಲಗಳಲ್ಲಿ ಜಮಾಯಿಸಿದ್ದ ಜನರು ಭಾರತ ಮತ್ತು ಫ್ರಾನ್ಸ್ ಧ್ವಜಗಳು ಹಾಗೂ ಇಬ್ಬರೂ ನಾಯಕರ ಪೋಸ್ಟರ್‌ಗಳನ್ನು ಹಿಡಿದು ಉತ್ಸಾಹ ತೋರಿದರು.
ಡಿಜಿಟಲ್ ಪಾವತಿ ಕುರಿತು ಮಾಹಿತಿ:
ಇದೇ ವೇಳೆ ಸ್ಥಳೀಯ ಅಂಗಡಿಗೆ ಫ್ರಾನ್ಸ್ ಅಧ್ಯಕ್ಷರನ್ನು ಕರೆದೊಯ್ದ ಮೋದಿ ಅವರು, ಭಾರತದಲ್ಲಿ ಜಾರಿಗೊಳಿಸಿರುವ ಡಿಜಿಟಲ್ ಪಾವತಿ ವ್ಯವಸ್ಥೆ, ಅದರ ಸುರಕ್ಷತೆ ಹಾಗೂ ‘ಭೀಮ್ ಆ್ಯಪ್’ ಕುರಿತು ಮಾಹಿತಿ ನೀಡಿದರು. ಅಲ್ಲಿನ ಅಂಗಡಿಯೊಂದರಲ್ಲಿ ಇದ್ದ ಅಯೋಧ್ಯೆಯ ರಾಮಮಂದಿರದ ಪ್ರತಿಕೃತಿಯನ್ನು ತೋರಿಸಿ, ವಿವರಿಸಿದರು. ಅಲ್ಲದೆ ಅದನ್ನು ಅವರಿಗೆ ಉಡುಗೊರೆಯಾಗಿ ನೀಡಿದರು.
ಚಹಾದ ಅಂಗಡಿಯೊಂದರ ಹೊರಗೆ ಕುಳಿತು ಉಭಯ ನಾಯಕರು ಚಹ ಸವಿದರು. ಆ ನಂತರ ಮೋದಿ ಅವರು ಚಹಾ ಅಂಗಡಿಯ ಮಾಲೀಕನಿಗೆ ಡಿಜಿಟಲ್ ಪಾವತಿ ಮೂಲಕ ಹಣ ವರ್ಗಾಯಿಸಿ, ಅದರ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದರ ಮಾಹಿತಿಯನ್ನು ಫ್ರಾನ್ಸ್ ಅಧ್ಯಕ್ಷರಿಗೆ ನೀಡಿದರು.
ಬಳಿಕ, ರೋಡ್ ಶೋ ಮೂಲಕ ನಾಯಕರು ಇತಿಹಾಸ ಪ್ರಸಿದ್ಧ ಹವಾಮಹಲ್‌ಗೆ ಭೇಟಿ ನೀಡಿದರು. 1799ರಲ್ಲಿ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ಅವರು ನಿರ್ಮಿಸಿದ 953 ಕಿಟಕಿಗಳನ್ನು ಹೊಂದಿರುವ ಹವಾಮಹಲ್‌ನ ಐತಿಹಾಸಿಕ ಮಹತ್ವ ಹಾಗೂ ಅಲ್ಲಿನ ವಾಸ್ತುಶಿಲ್ಪದ ಕುರಿತು ಮೋದಿ ಅವರು ಮ್ಯಾಕ್ರನ್‌ಗೆ ವಿವರಿಸಿದರು.
ರಾಜ್ಯಪಾಲ, ಸಿ.ಎಂರಿಂದ ಸ್ವಾಗತ:
ಜೈಪುರಕ್ಕೆ ಗುರುವಾರ ಮಧ್ಯಾಹ್ನ ಬಂದ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಮತ್ತು ಫ್ರಾನ್ಸ್ ನಿಯೋಗವನ್ನು ವಿಮಾನ ನಿಲ್ದಾಣದಲ್ಲಿ ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಮತ್ತು ಮುಖ್ಯಮಂತ್ರಿ ಭಜನಲಾಲ್ ಶರ್ಮಾ ಅವರು ಬರಮಾಡಿಕೊಂಡರು.
ಬಳಿಕ ಮ್ಯಾಕ್ರನ್ ಅವರು ಇಲ್ಲಿನ ಐತಿಹಾಸಿಕ ನೆಲೆಗಳು, ಅಂಬರ್ ಅರಮನೆ ಸೇರಿದಂತೆ ಕೆಲ ತಾಣಗಳನ್ನು ವೀಕ್ಷಿಸಿದರು. ಅಂಬಾರ್ ಕೋಟೆಯ ಬಳಿ ರಾಜಸ್ಥಾನದ ಚಿತ್ರಕಲೆಯನ್ನು ವೀಕ್ಷಿಸಿ, ಕಲಾವಿದರ ಜತೆ ಮಾತುಕತೆ ನಡೆಸಿದರು. ಅಲ್ಲಿಯೇ ಭಾರತದ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದವನ್ನೂ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.