ನವದೆಹಲಿ: ದೇಶದಾದ್ಯಂತ ವಿಜಯದಶಮಿ ಹಬ್ಬದ ಸಡಗರ ಮನೆ ಮಾಡಿದ್ದು, ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ದೇಶದ ಜನತೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಎಕ್ಸ್‌ನಲ್ಲಿ ಶುಭಾಶಯ ತಿಳಿಸಿರುವ ಮೋದಿ, ‘ನಕರಾತ್ಮಕ ಶಕ್ತಿಗಳನ್ನು ತೊಡೆದುಹಾಕಿ ಜೀವನದಲ್ಲಿ ಒಳ್ಳೆಯತನವನ್ನು ಅಳವಡಿಸಿಕೊಳ್ಳುವ ಉತ್ತಮ ಸಂದೇಶವನ್ನು ಈ ಹಬ್ಬವು ಹೊಂದಿದೆ. ದೇಶದ ಜನರಿಗೆ ವಿಜಯದಶಮಿಯ ಶುಭಾಶಯಗಳು’ ಎಂದು ಹೇಳಿದರು.
‘ಅಧರ್ಮದ ವಿರುದ್ಧ ಧರ್ಮವು ಜಯಿಸಿದ ಈ ವಿಜಯದಶಮಿಯ ದಿನದಂದು ನಮ್ಮ ನಡುವಿನ ದ್ವೇಷ, ಅಸೂಯೆ, ಅಸತ್ಯಗಳು ಅಳಿದು, ಸತ್ಯ, ಪ್ರೀತಿ, ಸೌಹಾರ್ದತೆಗಳು ವಿಜೃಂಭಿಸಲಿ ಎಂದು ಹಾರೈಸುತ್ತೇನೆ. ಕರುನಾಡು ಸುಖ, ಸಮೃದ್ಧಿಯನ್ನೊಳಗೊಂಡ ಸರ್ವಜನಾಂಗದ ಶಾಂತಿಯ ತೋಟವಾಗಲಿ ಎಂದು ಆಶಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
‘ಕೆಡುಕಿನ ವಿರುದ್ಧ ಒಳಿತಿನ ವಿಜಯದ ಮಹಾ ಹಬ್ಬವೇ ವಿಜಯದಶಮಿ. ಸುಳ್ಳು ಮತ್ತು ಅಹಂಕಾರ ನಾಶವಾಗಿ ಪ್ರತಿಯೊಬ್ಬರ ಜೀವನದಲ್ಲಿ ಸತ್ಯ ಮತ್ತು ಮಾನವೀಯತೆ ನೆಲೆಸುವಂತಾಗಬೇಕು’ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಬ್ಬದ ಶುಭಾಶಯ ಕೋರಿದ್ದಾರೆ.
'ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡದೇವತೆ ಚಾಮುಂಡೇಶ್ವರಿ ತಾಯಿ ಸಕಲ ಭಕ್ತರಿಗೆ ಆರೋಗ್ಯ, ಆಯಸ್ಸು, ನೆಮ್ಮದಿ ಕರುಣಿಸಿ ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.