ನವದೆಹಲಿ: ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ನೆನಪಿನಲ್ಲಿ ಇಂದು (ಆಗಸ್ಟ್ 29) ‘ರಾಷ್ಟ್ರೀಯ ಕ್ರೀಡಾ ದಿನ’ ಆಚರಿಸಲಾಗುತ್ತಿದ್ದು, ದೇಶದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಗಣ್ಯರು ಶುಭಾಶಯ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದುಕೊಂಡಿರುವ ಮೋದಿ, ‘ರಾಷ್ಟ್ರೀಯ ಕ್ರೀಡಾ ದಿನವಾದ ಇಂದು ದೇಶದ ಎಲ್ಲಾ ಕ್ರೀಡಾಪಟುಗಳಿಗೆ ನನ್ನ ಶುಭಾಶಯಗಳು. ನಿಮ್ಮ ಸಾಧನೆಗಳ ಬಗ್ಗೆ ಇಡೀ ಭಾರತವೇ ಹೆಮ್ಮೆಪಡುತ್ತದೆ. ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ’ ಎಂದು ಹೇಳಿದರು.
ಕ್ರೀಡಾ ದಿನದ ಅಂಗವಾಗಿ ದೆಹಲಿಯ ಜೆಎಲ್‌ಎನ್ ಕ್ರೀಡಾಂಗಣದಲ್ಲಿರುವ ಧ್ಯಾನ್ ಚಂದ್ ಪ್ರತಿಮೆಗೆ ಸಚಿವ ಅನುರಾಗ್ ಠಾಕೂರ್ ಪುಷ್ಪ ನಮನ ಸಲ್ಲಿಸಿದರು.
2012ರಲ್ಲಿ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನವನ್ನು ‘ರಾಷ್ಟ್ರೀಯ ಕ್ರೀಡಾ ದಿನ’ವೆಂದು ಘೋಷಿಸಲಾಯಿತು. ಅಂದಿನಿಂದ ಪ್ರತಿವರ್ಷ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಹಾಕಿ ಮಾಂತ್ರಿಕ ಧ್ಯಾನ್‌ಚಂದ್
ಧ್ಯಾನ್ ಚಂದ್ ಅವರು ಆಗಸ್ಟ್ 29, 1905ರಲ್ಲಿ ಅಲಹಾಬಾದ್‌ನಲ್ಲಿ ಜನಿಸಿದ್ದರು. ಬಾಲ್ಯದಲ್ಲಿಯೇ ಕ್ರೀಡೆಯಲ್ಲಿ ಆಸಕ್ತಿ ಬೆಳಸಿಕೊಂಡಿದ್ದ ಅವರು ಅತ್ಯುತ್ತಮ ಹಾಕಿ ಪಟು ಎನಿಸಿಕೊಂಡಿದ್ದರು. 1928ರ ಒಲಂಪಿಕ್ಸ್‌ನಲ್ಲಿ ಧ್ಯಾನ್ ಚಂದ್ ಸಾರಥ್ಯದಲ್ಲಿ ಭಾರತ ಮೊದಲ ಚಿನ್ನದ ಪದಕ ಗೆದ್ದುಕೊಂಡಿತ್ತು. ಇವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.