ನವದೆಹಲಿ: ‘ಮನ್ ಕೀ ಬಾತ್’ ರೇಡಿಯೊ ಕಾರ್ಯಕ್ರಮದ 112 ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ಮೋದಿ ಅವರ ಎರಡನೇ 'ಮನ್ ಕೀ ಬಾತ್' ಕಾರ್ಯಕ್ರಮ ಇದಾಗಿದೆ.
ಅಸ್ಸಾಂನ ಅಹೋಂ ರಾಜಮನೆತನ ನಿರ್ಮಿಸುತ್ತಿದ್ದ ದಿಬ್ಬ ಸ್ವರೂಪದ ಸಮಾಧಿಗಳಾದ ‘ಮೊಯ್ದಂ’ಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಈಶಾನ್ಯ ಭಾಗದ ಐತಿಹಾಸಿಕ ತಾಣವೊಂದಕ್ಕೆ ಯುನೆಸ್ಕೊ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಸಿಕ್ಕಂತಾಗಿದೆ. ಒಟ್ಟಾರೆ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ಭಾರತದ 43ನೇ ತಾಣವಾಗಿದೆ ಎಂದು ಮೋದಿ ಹೇಳಿದ್ದಾರೆ.
‘ಮೊಯ್ದಂ’ ಒಂದು ಬೆಟ್ಟದಂತಹ ರಚನೆಯಾಗಿದ್ದು, ಇದು ಮೇಲ್ಭಾಗದಲ್ಲಿ ಮಣ್ಣಿನಿಂದ ಮುಚ್ಚಲ್ಪಟ್ಟಿದ್ದು, ಕೆಳಭಾಗದಲ್ಲಿ ಒಂದು ಅಥವಾ ಹೆಚ್ಚಿನ ಕೋಣೆಗಳನ್ನು ಹೊಂದಿದೆ. ಇದು ಅಹೋಂ ರಾಜಮನೆತನ ಮತ್ತು ಗಣ್ಯರಿಗೆ ಸಂದ ಗೌರವದ ಸಂಕೇತವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
‘ನಮ್ಮ ಪೂರ್ವಜರಿಗೆ ಗೌರವ ತೋರಿಸುವ ಈ ವಿಧಾನವು ಅತ್ಯಂತ ವಿಶಿಷ್ಟವಾಗಿದೆ. ಈ ಸ್ಥಳದಲ್ಲಿ ಅಹೋಂ ರಾಜಮನೆತನದವರು 13ನೇ ಶತಮಾನದಿಂದ 19ನೇ ಶತಮಾನದವರೆಗೆ ನೆಲೆಸಿದ್ದರು. ಒಂದು ಸಾಮ್ರಾಜ್ಯವು ಇಷ್ಟು ದೀರ್ಘಾವಧಿಯವರೆಗೆ ಮುಂದುವರೆಯುವುದು ದೊಡ್ಡ ಸಾಧನೆಯಾಗಿದೆ. ತತ್ವಗಳು ಮತ್ತು ನಂಬಿಕೆಗಳು ಪ್ರಬಲವಾಗಿದ್ದರಿಂದ ಅಹೋಂ ರಾಜಮನೆತನ ದೀರ್ಘಕಾಲ ಜೀವಂತವಾಗಿರಲು ಸಾಧ್ಯವಾಗಿತ್ತು’ ಎಂದು ಮೋದಿ ಹೇಳಿದ್ದಾರೆ.
‘ಮೊಯ್ದಂ’ಗಳಿಗೆ ಪ್ರವಾಸಿಗರು ಭೇಟಿ ನೀಡುವಂತೆಯೂ ಮೋದಿ ಕರೆ ನೀಡಿದ್ದಾರೆ.
ಇದೇ ವೇಳೆ ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡ್ (ಐಎಂಒ) ಪರೀಕ್ಷೆಯಲ್ಲಿ ಭಾಗವಹಿಸಿದವರನ್ನು ಶ್ಲಾಘಿಸಿ, ಅವರೊಂದಿಗೆ ಸಂವಾದ ನಡೆಸಿದ ಮೋದಿ, ಭಾರತವು ನಾಲ್ಕನೇ ಸ್ಥಾನ ಪಡೆಯುವುದರೊಂದಿಗೆ ಸಾರ್ವಕಾಲಿಕ ಅತ್ಯುತ್ತಮ ಸಾಧನೆ ಮಾಡಿದೆ. ಇದು ಅತ್ಯಂತ ಖುಷಿ ಹಾಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
‘ಈ ಹಿಂದೆ ಖಾದಿ ಉತ್ಪನ್ನಗಳನ್ನು ಬಳಸದ ಜನರು ಈಗ ಹೆಮ್ಮೆಯಿಂದ ಖಾದಿ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಖಾದಿ ಗ್ರಾಮೋದ್ಯೋಗ ಉದ್ಯಮದ ವಹಿವಾಟು ₹1.5 ಲಕ್ಷ ಕೋಟಿ ದಾಟಿದೆ. ಅಲ್ಲದೆ, ಖಾದಿ ಮಾರಾಟವು ಶೇ 400ರಷ್ಟು ಹೆಚ್ಚಾಗಿದೆ. ಇದರಿಂದಾಗಿ ಖಾದಿ ಮತ್ತು ಕೈಮಗ್ಗ ಉದ್ಯಮವು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತಿದೆ’ ಎಂದೂ ಹೇಳಿದ್ದಾರೆ.
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ ಬಗ್ಗೆ ಪ್ರಸ್ತಾಪಿಸಿದ ಮೋದಿ, ‘ಒಲಿಂಪಿಕ್‌ನಲ್ಲಿನ ಕ್ರೀಡೆಗಳು ನಮ್ಮ ಕ್ರೀಡಾಪಟುಗಳಿಗೆ ಭಾರತದ ಧ್ವಜವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಲು ಅವಕಾಶ ನೀಡುತ್ತವೆ. ಆದ್ದರಿಂದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಹಾಗೂ ಭಾರತವನ್ನು ಹುರಿದುಂಬಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.