ವಾರಾಣಸಿ: ‘ದೇಶವೀಗ ಗುಲಾಮಗಿರಿಯ ಮನಃಸ್ಥಿತಿಯಿಂದ ಸ್ವಾತಂತ್ರ್ಯ ಪಡೆದಿದ್ದು, ತನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇಲ್ಲಿ ಪ್ರತಿಪಾದಿಸಿದರು.
ತಾವು ಪ್ರತಿನಿಧಿಸುವ ವಾರಾಣಸಿ ಕ್ಷೇತ್ರದಲ್ಲಿ ಬೃಹತ್ ಅಧ್ಯಾತ್ಮ ಕೇಂದ್ರ ‘ಸ್ವರವೇದ ಮಹಾಮಂದಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ₹ 19,000 ಕೋಟಿ ಅಂದಾಜು ವೆಚ್ಚದ ಅಭಿವೃದ್ಧಿ ಯೋಜನೆಗಳಿಗೂ ಈ ಸಂದರ್ಭದಲ್ಲಿ ಚಾಲನೆ ನೀಡಿದರು.
‘ಗುಲಾಮಿಗಿರಿಯ ಯುಗದಲ್ಲಿ ದೇಶವನ್ನು ದುರ್ಬಲಗೊಳಿಸುವ ಯತ್ನವಾಗಿ, ನಮ್ಮ ಹೆಗ್ಗುರುತುಗಳನ್ನು ಗುರಿಯಾಗಿಸಿ ದಾಳಿ ನಡೆಯಿತು. ಈಗ ಆ ಎಲ್ಲ ಸಾಂಸ್ಕೃತಿಕ ಹೆಗ್ಗುರುತುಗಳ ಮರುನಿರ್ಮಾಣ ಅತ್ಯಗತ್ಯವಾಗಿದೆ’ ಎಂದು ಪ್ರತಿಪಾದಿಸಿದರು.
‘ಸ್ವಾತಂತ್ರ್ಯದ ಏಳು ದಶಕದ ಬಳಿಕ ಈಗ ಕಾಲಚಕ್ರ ತಿರುಗಿದೆ. ಗುಲಾಮಗಿರಿ ಮನಃಸ್ಥಿತಿಯ ಕೆಂಪುಕೋಟೆಯ ಸ್ವಾತಂತ್ರ್ಯದಿಂದ ದೇಶ ಮುಕ್ತವಾಗಿದೆ. ಪರಂಪರೆ ಬಗ್ಗೆ ಹೆಮ್ಮೆಪಡುತ್ತಿದೆ’ ಎಂದು ಹೇಳಿದರು.
‘ವಿಶ್ವನಾಥನ ಘನತೆ, ಔನ್ನತ್ಯವು ಭಾರತದ ವೈಭವವನ್ನು ಸಾರುತ್ತಿವೆ. ಅಭಿವೃದ್ಧಿಯ ಹೊಸ ಎತ್ತರವನ್ನು ಕೇದಾರನಾಥ ಮುಟ್ಟಿದೆ. ಮಹಾಕಾಳ ಮಹಾಲೋಕವು ಅಮರತ್ವದ ಸಂಕೇತವಾಗಿದೆ’ ಎಂದು ಪ್ರಧಾನಿ ಬಣ್ಣಿಸಿದರು.
ಬುದ್ಧ ಸರ್ಕ್ಯೂಟ್ ಅಭಿವೃದ್ಧಿಯ ಮೂಲಕ ವಿಶ್ವವನ್ನೇ ಬುದ್ಧ ಅಧ್ಯಾತ್ಮ ಕೇಂದ್ರದತ್ತ ಭಾರತ ಸೆಳೆಯುತ್ತಿದೆ. ರಾಮ ಸರ್ಕ್ಯೂಟ್ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆದಿದೆ. ಕೆಲವೇ ವಾರಗಳಲ್ಲಿ ರಾಮಮಂದಿರ ನಿರ್ಮಾಣ ಪೂರ್ಣವಾಗಲಿದೆ. ದೇಶದ ಸಾಮಾಜಿಕ ಸತ್ಯ, ಸಾಂಸ್ಕೃತಿಕ ಹೆಗ್ಗುರುತುಗಳು ಸಮೀಕರಿಸುತ್ತಿರುವ ಹೊತ್ತಿನಲ್ಲಿ ಸಮಗ್ರ ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕಾಗಿದೆ ಎಂದು ಹೇಳಿದರು.
‘ಕಾಶಿ ವಿಶ್ವನಾಥ ಧಾಮ ಅಭಿವೃದ್ಧಿಯ ಬಳಿಕ ಉದ್ಯೋಗಾವಕಾಶ, ವಹಿವಾಟು, ಉದ್ಯಮ ಗರಿಗೆದರಿವೆ. ವಾರಾಣಸಿ ಈಗ ಸ್ವಚ್ಛತೆ ಮತ್ತು ಪರಿವರ್ತನೆಗೆ ಇನ್ನೊಂದು ಹೆಸರಾಗಿದೆ. ಒಂಭತ್ತು ವರ್ಷಗಳಲ್ಲಿ ವಾರಾಣಸಿ ಕ್ಷೇತ್ರವು ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ತಿಳಿಸಿದರು.
ಭಾಷಣ ತರ್ಜುಮೆಗೆ ಎ.ಐ ತಂತ್ರಜ್ಞಾನ
ವಾರಾಣಸಿ (ಪಿಟಿಐ): ಕೃತಕ ಬುದ್ದಿಮತ್ತೆ (ಎ.ಐ) ತಂತ್ರಜ್ಞಾನ ಬಳಸಿ ಸ್ಥಳೀಯ ಭಾಷೆಗೆ ಭಾಷಣ ಅನುವಾದಿಸುವ ಸೌಲಭ್ಯ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಬಳಕೆಯಾಯಿತು.
ಕಾಶಿ ತಮಿಳ್ ಸಂಗಮಂ ಕಾರ್ಯಕ್ರಮಕ್ಕಾಗಿ ತಮಿಳುನಾಡಿನಿಂದ ಬಂದಿದ್ದವರ ಜೊತೆಗೆ, ಈ ಸೌಲಭ್ಯದ ಮೂಲಕ ಪ್ರಧಾನಿ, ಅವರದೇ ಭಾಷೆಯಲ್ಲಿ ‘ಸಂವಹನ’ ನಡೆಸಿದರು.
ಇಯರ್‌ಫೋನ್ ಹಾಕಿಕೊಳ್ಳಲು ಭಾಷಣದ ಆರಂಭದಲ್ಲೇ ಸಭಿಕರಿಗೆ ಕೋರಿದರು. ‘ನನ್ನ ಹಿಂದಿ ಭಾಷಣವನ್ನು ನಿಮ್ಮ ಭಾಷೆಗೆ ತರ್ಜುಮೆಗೊಳಿಸಲು ಮೊದಲ ಬಾರಿಗೆ ಎ.ಐ ತಂತ್ರಜ್ಞಾನ ಬಳಸುತ್ತಿದ್ದೇನೆ. ಇದು ನನ್ನ ಮೊದಲ ಅನುಭವ. ಭವಿಷ್ಯದಲ್ಲಿ ಇದನ್ನೇ ಬಳಸುತ್ತೇನೆ. ಹಿಂದಿಯ ಭಾಷಣ, ತಕ್ಷಣವೇ ತಮಿಳಿಗೆ ತರ್ಜುಮೆಯಾಗಲಿದೆ’ ಎಂದರು.
ಆದರೆ, ಈ ಪ್ರಯೋಗ ಕೆಲ ನಿಮಿಷಕ್ಕಷ್ಟೇ ಸೀಮಿತವಾಯಿತು. ಬಳಿಕ ಪ್ರಧಾನಿ ಭಾಷಣವನ್ನು ಭಾಷಾಂತರಕಾರರೊಬ್ಬರು ತಮಿಳಿಗೆ ಅನುವಾದಿಸಿದರು.
ಏಳು ಮಹಡಿಗಳ ಸಂಕೀರ್ಣ
ಜಗತ್ತಿನಲ್ಲೇ ಅತಿದೊಡ್ಡದು ಎನ್ನಲಾದ ಅಧ್ಯಾತ್ಮ ಕೇಂದ್ರ ‘ಸ್ವರವೇದ ಮಹಾಮಂದಿರ’ವನ್ನು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಉದ್ಘಾಟಿಸಿದರು. 20 ಸಾವಿರ ಮಂದಿ ಏಕಕಾಲಕ್ಕೆ ಆಧ್ಯಾತ್ಮಿಕ ಚಟುವಟಿಕೆ, ಧ್ಯಾನದಲ್ಲಿ ಭಾಗವಹಿಸಬಹುದಾಗಿದೆ. ಏಳು ಮಹಡಿಗಳ ಈ ಸಂಕೀರ್ಣದಲ್ಲಿ ಗೋಡೆಗಳ ಮೇಲೆ ಸ್ವರವೇದದ ಚರಣಗಳನ್ನು ಕೆತ್ತಲಾಗಿದೆ.
9 ಮನವಿ
ಲೋಕಸಭೆಯಲ್ಲಿ ತಾವು ಪ್ರತಿನಿಧಿಸುವ ಕ್ಷೇತ್ರದ ಜನರೆದರು ಪ್ರಧಾನಿ 9 ಮನವಿ ಮುಂದಿಟ್ಟರು. ಆ ಮನವಿಗಳು–
* ಪ್ರತಿ ಹನಿ ನೀರಿನ ಸಂರಕ್ಷಣೆ, ಈ ಬಗ್ಗೆ ಜನಜಾಗೃತಿ ಮೂಡಿಸುವುದು
* ಹಳ್ಳಿ, ಹಳ್ಳಿಗಳಿಗೆ ತೆರಳಿ ಡಿಜಿಟಲ್ ವಹಿವಾಟು ಕುರಿತು ಅರಿವು ಮೂಡಿಸುವುದು
* ತನ್ನ ವಾಸಸ್ಥಳ, ಬೀದಿ, ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡುವುದು
* ಸ್ಥಳೀಯ ಉತ್ಪನ್ನಗಳನ್ನೇ ಆದಷ್ಟೂ ಬಳಸುವುದು
* ಮೊದಲು ನಿಮ್ಮ ದೇಶದ ವಿವಿಧೆಡೆ ಪ್ರವಾಸ ಮಾಡಿ
* ಸಹಜ ಕೃಷಿ ಕುರಿತು ರೈತರಲ್ಲಿ ಆದಷ್ಟೂ ಅರಿವು ಮೂಡಿಸಿ
* ನಿತ್ಯದ ಬಳಕೆಯಲ್ಲಿ ಸಿರಿಧಾನ್ಯಕ್ಕೇ ಆದ್ಯತೆ ನೀಡಿ
* ಯೋಗ, ಕ್ರೀಡೆಯಲ್ಲಿ ತೊಡಗಿ. ದೇಹಾರೋಗ್ಯ ರಕ್ಷಿಸಿಕೊಳ್ಳಿ
* ಕನಿಷ್ಠ ಒಂದು ಬಡಕುಟುಂಬಕ್ಕೆ ನೆರವಾಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.