ನವದೆಹಲಿ: ‘ಮುಂಗಾರು ಆರಂಭವಾಗುವವರೆಗೂ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ(ನರೇಗಾ) ಯೋಜನೆಗೆ ಮೀಸಲಿಟ್ಟಿರುವ ಪ್ರತಿ ಪೈಸೆಯನ್ನೂ ಮಳೆ ನೀರು ಸಂರಕ್ಷಣೆಗೆ ಖರ್ಚು ಮಾಡಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದರು.
ವಿಶ್ವ ಜಲದಿನಾಚರಣೆ ಅಂಗವಾಗಿ ‘ಜಲ ಶಕ್ತಿ ಅಭಿಯಾನ: ಕ್ಯಾಚ್ ದಿ ರೈನ್‘ ಆಂದೋಲನಕ್ಕೆ ಸೋಮವಾರ ವರ್ಚುವಲ್ ಆಗಿ ಚಾಲನೆ ನೀಡಿ ಮಾತನಾಡಿದ ಅವರು, ‘ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ವ್ಯರ್ಥವಾಗುತ್ತಿದ್ದು, ಇದು ಆತಂಕದ ವಿಷಯವಾಗಿದೆ. ಸುರಿಯುವ ಮಳೆ ನೀರನ್ನು ಬಹುಪಾಲು ಸಂರಕ್ಷಿಸಿದರೆ, ಅಂತರ್ಜಲದ ಮೇಲೆ ಅವಲಂಬನೆ ಆಗುವುದನ್ನು ತಪ್ಪಿಸಬಹುದು‘ ಎಂದು ಅವರು ಹೇಳಿದರು.
‘ಭಾರತ ಜಲ ಸಂಪನ್ಮೂಲ ವಿಷಯದಲ್ಲಿ ಸ್ವಾವಲಂಬನೆ ಸಾಧಿಸಬೇಕಿದೆ. ಪರಿಣಾಮಕಾರಿ ಜಲ ಸಂರಕ್ಷಣಾ ವಿಧಾನ ಅಳವಡಿಸಿಕೊಳ್ಳದಿದ್ದರೆ, ದೇಶ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ' ಎಂದು ಹೇಳಿದ ಪ್ರಧಾನಿ, ‘ನೀರನ್ನು ನ್ಯಾಯಯುತವಾಗಿ ಬಳಸಬೇಕು' ಎಂದು ಸಲಹೆ ಮಾಡಿದರು.
ಈ ವರ್ಚುವಲ್ ಕಾರ್ಯಕ್ರಮದಲ್ಲಿ ದೇಶದಾದ್ಯಂತ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು. ಅವರಲ್ಲಿ ಕೆಲವರು ತಾವು ಕೈಗೊಂಡಿರುವ ಜಲ ಸಂರಕ್ಷಣೆಯ ವಿಚಾರಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.
‘ಕ್ಯಾಚ್ ದಿ ರೈನ್‘ ಆಂದೋಲನವನ್ನು ದೇಶದಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರಂಭಿಸಲಾಗುತ್ತಿದೆ. ಇಂದಿನಿಂದ (ಮಾರ್ಚ್ 22) ನವೆಂಬರ್ 30ರವರೆಗೆ (ಮುಂಗಾರು ಮತ್ತು ಹಿಂಗಾರು ಅವಧಿ)ಈ ಆಂದೋಲನ ಚಾಲನೆಯಲ್ಲಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.