ಅದಿಲಾಬಾದ್: ತೆಲಂಗಾಣದಲ್ಲಿ ಸುಮಾರು ₹ 56 ಸಾವಿರ ಕೋಟಿಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಸೋಮವಾರ) ಚಾಲನೆ ನೀಡಿದರು. ಇದರಲ್ಲಿ ರೈಲು, ರಸ್ತೆ ಮತ್ತು ವಿದ್ಯುತ್ ಯೋಜನೆಗಳು ಸೇರಿವೆ.
ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ, ಪ್ರಧಾನಮಂತ್ರಿಯವರು ಇತರ ಯೋಜನೆಗಳ ಜೊತೆಗೆ, ಪೆದ್ದಪಲ್ಲಿಯಲ್ಲಿ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ (NTPC) ತೆಲಂಗಾಣ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್‌ನ 800 MW (ಯುನಿಟ್-2) ಅನ್ನು ದೇಶಕ್ಕೆ ಸಮರ್ಪಿಸಿದರು.
ಅಲ್ಟ್ರಾ ಸೂಪರ್‌ಕ್ರಿಟಿಕಲ್ ತಂತ್ರಜ್ಞಾನದ ಆಧಾರದ ಮೇಲೆ, ಈ ಯೋಜನೆಯು ತೆಲಂಗಾಣಕ್ಕೆ ಶೇ 85ರಷ್ಟು ವಿದ್ಯುತ್ ಅನ್ನು ಪೂರೈಸುತ್ತದೆ. ಪ್ರಧಾನಿ ಮೋದಿ ಅವರೇ ಹಿಂದೆ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
'ಪ್ರಧಾನಿ ಎಂದರೆ ಹಿರಿಯ ಸಹೋದರನಂತೆ. ಮೋದಿ ತವರು ರಾಜ್ಯವಾದ ಗುಜರಾತ್‌ನಂತೆ ಪ್ರಗತಿ ಸಾಧಿಸಲು ರಾಜ್ಯಕ್ಕೆ ಅವರ ಬೆಂಬಲ ಬೇಕು' ಎಂದು ಸಿಎಂ ರೇವಂತ್ ರೆಡ್ಡಿ ಹೇಳಿದರು. ಅಲ್ಲದೇ ರಾಜ್ಯವು ಕೇಂದ್ರದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಬಯಸುತ್ತದೆ ಎಂದೂ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ, ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.