ADVERTISEMENT

‘ಪಿ.ಎಂ ವಿಶ್ವಕರ್ಮ’ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಪಿಟಿಐ
Published 17 ಸೆಪ್ಟೆಂಬರ್ 2023, 9:46 IST
Last Updated 17 ಸೆಪ್ಟೆಂಬರ್ 2023, 9:46 IST
   

ನವದೆಹಲಿ: ವಿಶ್ವಕರ್ಮ ಜಯಂತಿಯ ಅಂಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಪಿ.ಎಂ ವಿಶ್ವಕರ್ಮ’ ಎಂಬ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆಯಿಂದ ಸಾಂಪ್ರದಾಯಿಕ ಕೌಶಲ ಕಾರ್ಯಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಹಾಗೂ ಕರಕುಶಲಿಗರಿಗೆ ಸಹಾಯವಾಗಲಿದೆ.

ಯೋಜನೆ ಅಡಿ ಫಲಾನುಭವಿಗಳಿಗೆ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ ನೀಡಲಾಗುತ್ತದೆ. ಮೂಲಭೂತ ಮತ್ತು ಸುಧಾರಿತ ತರಬೇತಿ ಒಳಗೊಂಡ ಕೌಶಲ ಉನ್ನತೀಕರಣ, ₹ 15,000ದಷ್ಟು ಟೂಲ್‌ಕಿಟ್‌ ಪ್ರೋತ್ಸಾಹ ಧನ, ₹ 1 ಲಕ್ಷದವರೆಗೆ ಆಧಾರ ರಹಿತ ಸಾಲ (ಮೊದಲ ಕಂತು) ಮತ್ತು ಶೇಕಡಾ 5ರ ಬಡ್ಡಿ ದರದಲ್ಲಿ ₹ 2 ಲಕ್ಷ (ಎರಡನೇ ಕಂತು) ಸಾಲ ನೀಡಲಾಗುವುದು. ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಧನ ಮತ್ತು ಮಾರುಕಟ್ಟೆ ವ್ಯವಹಾರಕ್ಕೆ ಬೆಂಬಲ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಯೋಜನೆಯಡಿ ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಮಡಿವಾಳರು ಮತ್ತು ಕ್ಷೌರಿಕರು ಸೇರಿದಂತೆ ಸುಮಾರು 30 ಲಕ್ಷ ಕುಟುಂಬಗಳಿಗೆ ಪ್ರಯೋಜನ ಸಿಗಲಿದೆ.

ADVERTISEMENT

ಪಿ.ಎಂ ವಿಶ್ವಕರ್ಮ ಯೋಜನೆ ಪ್ರಾರಂಭಿಸುವುದಾಗಿ ಮೋದಿ ಅವರು ಸ್ವಾತಂತ್ರ್ಯ ದಿನದಂದು ಘೋಷಿಸಿದ್ದರು. ಇದಕ್ಕಾಗಿ ₹ 13 ಸಾವಿರ ಕೋಟಿಯಷ್ಟು ನಿಧಿಯನ್ನು ಮೀಸಲಿಡಲಾಗಿದೆ. ಈ ಯೋಜನೆಯಡಿ ಬಯೋಮೆಟ್ರಿಕ್‌ ಆಧಾರಿತ ಪಿ.ಎಂ ವಿಶ್ವಕರ್ಮ ಪೊರ್ಟಲ್‌ನಲ್ಲಿ ಅರ್ಹ ಫಲಾನುಭವಿಗಳು ತಮ್ಮ ಹೆಸರನ್ನು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.

ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲಿಗರ ಉತ್ಪನ್ನಗಳು ಮತ್ತು ಸೇವೆಗಳ ಲಭ್ಯತೆ ಹಾಗೂ ಗುಣಮಟ್ಟವನ್ನು ಉತ್ತಮಗೊಳಿಸುವುದು ಯೋಜನೆಯ ಗುರಿಯಾಗಿದೆ

ಯೋಜನೆಯ ಲಾಭ ಪಡೆಯಲು ಫಲಾನುಭವಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.

ಇಂದು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವೂ ಹೌದು, ಅವರು 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಟೂಲ್‌ ಕಿಟ್‌ಗೆ ನೆರವು:

ಅತಿಸಣ್ಣ, ಸಣ್ಣ ಹಾಗೂ ಮಾಧ್ಯಮ ಉದ್ಯಮಗಳ ಸಚಿವಾಲಯವು ಈ ಯೋಜನೆಯ ನೋಡಲ್‌ ಏಜೆನ್ಸಿಯಾಗಿದೆ. ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಸಣ್ಣ ಪ್ರಮಾಣದ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಕ‍ಂಪನಿಗಳು, ಸಣ್ಣ ಹಣಕಾಸು ಸಂಸ್ಥೆಗಳಿಂದ ಫಲಾನುಭವಿಗಳಿಗೆ ಸಾಲ ಸೌಲಭ್ಯ ಸಿಗಲಿದೆ.

ಫಲಾನುಭವಿಗಳಿಗೆ ಶೇ 5ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರವು ಸಂಬಂಧಪಟ್ಟ ಬ್ಯಾಂಕ್‌ಗಳು ಅಥವಾ ಇತರೆ ಹಣಕಾಸು ಸಂಸ್ಥೆಗಳಿಗೆ ಶೇ 8ರಷ್ಟು ಬಡ್ಡಿ ಸಹಾಯಧನ ನೀಡಲಿದೆ. 

ಫಲಾನುಭವಿಗೆ ಟೂಲ್‌ ಕಿಟ್‌ ಖರೀದಿಗಾಗಿ ಯೋಜನೆಯಡಿ ₹15 ಸಾವಿರ ಮೌಲ್ಯದ ಇ–ವೋಚರ್ಸ್‌ ಅಥವಾ ಇ–ರುಪಿ ನೀಡಲಾಗುವುದು. ಸರ್ಕಾರದ ಪರವಾಗಿ ಈ ಪ್ರೋತ್ಸಾಹಧನದ ವೋಚರ್ಸ್‌ಗಳನ್ನು ಬ್ಯಾಂಕ್‌ ಮೂಲಕ ನೀಡಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.