ಲಖನೌ: ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಎರಡನೇ ಹಂತ ‘ಉಜ್ವಲಾ 2.0’ಗೆ ಮಂಗಳವಾರ ಚಾಲನೆ ನೀಡಿದರು.
ವರ್ಚುವಲ್ ವಿಧಾನದ ಮೂಲಕ ನಡೆದ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮಹೋಬಾ ಪಟ್ಟಣದ 10 ಜನ ಮಹಿಳೆಯರಿಗೆ ಪ್ರಧಾನಿ ಅವರು ಉಚಿತ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ‘ದೇಶದ ಸಂಪನ್ಮೂಲಗಳು ಎಲ್ಲರಿಗೂ ತಲುಪಬೇಕು ಎಂಬುದೇ ಸರ್ಕಾರದ ಉದ್ದೇಶ’ ಎಂದರು.
‘ಈ ವರ್ಷ ಸ್ವಾತಂತ್ರ್ಯೋತ್ಸವದ 75ನೇ ವರ್ಷವನ್ನು ಆಚರಿಸಲಿದ್ದೇವೆ. ಕಳೆದ ಏಳೂವರೆ ದಶಕಗಳಲ್ಲಾದ ಪ್ರಗತಿಯನ್ನು ಅವಲೋಕಿಸಿದಾಗ, ಕೆಲವು ಪರಿಸ್ಥಿತಿಗಳಲ್ಲಿ ಕೆಲ ದಶಕಗಳ ಹಿಂದೆಯೇ ಬದಲಾವಣೆ ಆಗಬೇಕಿತ್ತು ಎಂಬ ಭಾವನೆ ಮೂಡುತ್ತದೆ’ ಎಂದು ಹೇಳಿದರು.
‘ಕುಡಿಯುವ ನೀರು, ರಸ್ತೆ, ವಿದ್ಯುತ್, ಆಸ್ಪತ್ರೆ, ಶಾಲೆ, ಅಡುಗೆ ಅನಿಲ, ಮನೆಗಳಂತಹ ಅಗತ್ಯ ಸೌಲಭ್ಯಗಳಿಗಾಗಿ ಜನರು ದಶಕಗಟ್ಟಲೇ ಕಾಯಬೇಕಾಯಿತು. ಅದರಲ್ಲೂ ಮಹಿಳೆಯರು ಹೆಚ್ಚು ತೊಂದರೆ ಅನುಭವಿಸಬೇಕಾಯಿತು. ಇದು ದುರದೃಷ್ಟಕರ’ ಎಂದರು.
ನಂತರ ಅವರು ಕೆಲವು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
ಪ್ರಧಾನಿ ಪರವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಿಲಿಂಡರ್‌ಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಹಸ್ತಾಂತರಿಸಿದರು. ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.