ADVERTISEMENT

ಮೋದಿ ಜನರಿಂದ ನಾಯಕರಾಗಿದ್ದಾರೆ, ರಾಹುಲ್‌ ವಂಶದ ಜಪದಿಂದ ನಾಯಕರಾಗಿದ್ದಾರೆ: ನಖ್ವಿ

ಪಿಟಿಐ
Published 12 ಜೂನ್ 2023, 10:32 IST
Last Updated 12 ಜೂನ್ 2023, 10:32 IST
ಮುಖ್ತಾರ್‌ ಅಬ್ಬಾಸ್‌ ನಖ್ವಿ
ಮುಖ್ತಾರ್‌ ಅಬ್ಬಾಸ್‌ ನಖ್ವಿ   

ವಯನಾಡ್‌ (ಕೇರಳ): ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತ ನಾಯಕರಾಗಿದ್ದಾರೆ, ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ವಂಶದ ಜಪದಿಂದ ನಾಯಕರಾಗಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಮುಖ್ತಾರ್‌ ಅಬ್ಬಾಸ್‌ ನಖ್ವಿ ಸೋಮವಾರ ಹೇಳಿದ್ದಾರೆ.

ಲೋಕಸಭೆ ಸದಸ್ಯತ್ವದಿಂದ ರಾಹುಲ್‌ ಗಾಂಧಿ ಅನರ್ಹಗೊಳ್ಳುವ ಮುನ್ನ ಪ್ರತಿನಿಧಿಸುತ್ತಿದ್ದ ವಯನಾಡು ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಖ್ವಿ, ‘ಜನರಿಂದ ಆಯ್ಕೆಯಾಗಿ ನಾಯಕನಾಗುವುದಕ್ಕೂ’ ಮತ್ತು ‘ಆಕಸ್ಮಿಕವಾಗಿ ನಾಯಕನಾಗುವುದಕ್ಕೂ’ ಭಾರಿ ವ್ಯತ್ಯಾಸವಿದೆ ಎಂದು ಹೇಳಿದರು.

‘ಏಕ್‌ ಭಾರತ್‌, ಶ್ರೇಷ್ಠ ಭಾರತ್‌’ ಸಾಧಿಸಲು ಪ್ರಧಾನಿ ಮೋದಿಯವರ ಕ್ರಿಯಾತ್ಮಕ ನಾಯಕತ್ವದ ಅಡಿಯಲ್ಲಿ ಭ್ರಷ್ಟಾಚಾರ, ಕೋಮುವಾದ ಮತ್ತು ಜಾತೀಯತೆಯನ್ನು ತೊಡೆದುಹಾಕುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದಾಗಿ ಭಾರತದ ಜಾಗತಿಕ ಸ್ಥಾನಮಾನವು ಗಮನಾರ್ಹವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಮೂರು ದಿನಗಳ ಕೇರಳ ಪ್ರವಾಸದಲ್ಲಿರುವ ನಖ್ವಿ, ಮೋದಿ ಅವರು ಸಾಮಾನ್ಯ ಹಿನ್ನೆಲೆಯಿಂದ ಬಂದಿದ್ದು, ಸಾಮಾನ್ಯ ಜನರ ನೋವನ್ನು ಅರ್ಥಮಾಡಿಕೊಂಡಿರುವುದರಿಂದ ಕೇಂದ್ರದ ಪ್ರತಿಯೊಂದು ಕಲ್ಯಾಣ ಯೋಜನೆಯು ನಿರ್ಗತಿಕರ ಮೇಲೆ ಕೇಂದ್ರೀಕರಿಸಿರುತ್ತದೆ ಎಂದು ಹೇಳಿದರು. ಅಭಿವೃದ್ಧಿ, ತಾರತಮ್ಯ ರಹಿತ ಸಬಲೀಕರಣ ಮೋದಿ ಸರ್ಕಾರದ ಮಂತ್ರವಾಗಿದೆ ಎಂದರು.

ನಾಯಕನು ಅಧಿಕಾರದಿಂದ ಶ್ರೇಷ್ಠನಾಗುವುದಿಲ್ಲ, ರಾಷ್ಟ್ರವನ್ನು ಸಶಕ್ತಗೊಳಿಸಲು ಅವರ ಬದ್ಧತೆ, ಧೈರ್ಯ ಮತ್ತು ದೃಢವಿಶ್ವಾಸದಿಂದ ಶ್ರೇಷ್ಠನಾಗುತ್ತಾನೆ. ಮೋದಿಯವರ ನಾಯಕತ್ವದಲ್ಲಿ ಜನರು ಪಿಎಂ ಗರೀಬ್‌ ಕಲ್ಯಾಣ ಯೋಜನೆ, ಪಿಎಂ ಆವಾಸ್‌ ಯೋಜನೆ ಮತ್ತು ಸ್ವಚ್ಛ ಭಾರತ್‌ ಮಿಷನ್‌ನಂತಹ ವಿವಿಧ ಯೋಜನೆಗಳಿಂದ ಹೆಚ್ಚು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ನಖ್ವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.