ADVERTISEMENT

ನರೇಂದ್ರಿ ಮೋದಿಯ ಹ್ಯೂಸ್ಟನ್‌ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 19:45 IST
Last Updated 22 ಸೆಪ್ಟೆಂಬರ್ 2019, 19:45 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಬಾರಿಯ ತಮ್ಮ ಅಧಿಕಾರ ಅವಧಿಯಲ್ಲಿ ಅಮೆರಿಕಕ್ಕೆ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿ. ಬಹುನಿರೀಕ್ಷೆ ಹುಟ್ಟಿಸಿದ ‘ಹೌಡಿ ಮೋದಿ’ ಕಾರ್ಯಕ್ರಮದ ಹೊರತಾಗಿ ಮೋದಿ ಅವರು ಹ್ಯೂಸ್ಟನ್‌ನಲ್ಲಿಏನೆಲ್ಲ ಮಾಡಿದರು, ಯಾರನೆಲ್ಲಾಭೇಟಿಯಾದರು ಎಂಬುದರ ಬಿಡಿ ಚಿತ್ರಗಳು ಇಲ್ಲಿವೆ..

ಸಿಖ್ಖರ ಸ್ನೇಹಿತ

ಹ್ಯೂಸ್ಟನ್‌ನಲ್ಲಿರುವ ಸಿಖ್ ಸಮುದಾಯದ ಜನರ ಜತೆಯೂ ಮೋದಿ ಮಾತುಕತೆ ನಡೆಸಿದರು.

ADVERTISEMENT

ದೇಶವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಕಪ್ಪುಪಟ್ಟಿ ಸೇರಿದ್ದ ಸಿಖ್ ಸಮುದಾಯದವರನ್ನು ಆ ಪಟ್ಟಿಯಿಂದ ತೆಗೆದುಹಾಕಿದ್ದಕ್ಕೆ ಸಿಖ್ ಸಮುದಾಯವು ಮೋದಿ ಅವರಿಗೆ ಧನ್ಯವಾದಗಳನ್ನು ಹೇಳಿದೆ.

‘ಮೋದಿ ಅವರದ್ದು ಹೃದಯದಾಳದ ಮಾತು. ಅವರು ಸಿಖ್ ಸಮುದಾಯದ ಮಹಾನ್‌ ಸ್ನೇಹಿತ’ ಎಂದು ಸಿಖ್ ಸಮುದಾಯದ ನಿಯೋಗವು ಹೇಳಿದೆ.

ಕಾಶ್ಮೀರಿ ಪಂಡಿತರಿಗೆ ಸಾಂತ್ವಾನ

ಹ್ಯೂಸ್ಟನ್‌ನಲ್ಲಿ ಕಾಶ್ಮೀರ ಪಂಡಿತರ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.

‘ಕಾಶ್ಮೀರದಲ್ಲಿ ಈಗ ಹೊಸಗಾಳಿ ಬೀಸುತ್ತಿದೆ. ನಾವು ಹೊಸ ಕಾಶ್ಮೀರವನ್ನು ನಿರ್ಮಿಸುತ್ತಿದ್ದೇವೆ. ಬದುಕಲು ಅಲ್ಲಿ ಎಲ್ಲರಿಗೂ ಅವಕಾಶವಿರಲಿದೆ’ ಎಂದು ಮೋದಿ ಅವರು ಹೇಳಿದ್ದಾರೆ.

‘ನೀವು ಸಾಕಷ್ಟು ನೋವು ತಿಂದಿದ್ದೀರಿ. ಇದೆಲ್ಲಾ ಸುಧಾರಿಸಲಿದೆ’ ಎಂದು ಮೋದಿ ಅವರು ಹೇಳಿದ್ದಾರೆ. ಈ ಮೂಲಕ ನಮ್ಮಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ’ ಎಂದು ಕಾಶ್ಮೀರಿ ಪಂಡಿತರ ನಿಯೋಗವು ಹರ್ಷ ವ್ಯಕ್ತಪಡಿಸಿದೆ.

ಹೂ ತೆಗೆದುಕೊಟ್ಟ ಮೋದಿ

ಹ್ಯೂಸ್ಟನ್‌ನ ಜಾರ್ಜ್‌ ಬುಷ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿತಮಗೆ ನೀಡಿದ ಹೂಗುಚ್ಛದಿಂದ ಕೆಳಗೆ ಬಿದ್ದ, ಹೂವೊಂದನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಟ್ಟಿದ್ದಾರೆ.

ವಿಮಾನದಿಂದ ಇಳಿದ ಮೋದಿ ಅವರನ್ನು ರಾಜತಾಂತ್ರಿಕರು ಬರಮಾಡಿಕೊಂಡರು. ಈ ವೇಳೆ ಅವರ ಸ್ವಾಗತಕ್ಕೆ ಹೂಗುಚ್ಛ ನೀಡಲಾಯಿತು. ಅದರಿಂದ ಒಂದು ಹೂ ಅಥವಾ ಹೂವಿನ ದಂಟು ಕೆಳಗೆ ಬಿತ್ತು. ಹೂಗುಚ್ಚವನ್ನು ಮೋದಿ ಅವರು ತಮ್ಮ ಭದ್ರತಾ ಸಿಬ್ಬಂದಿಗೆ ನೀಡಿದರು. ಒಂದು ಹೆಜ್ಜೆ ಮುಂದೆ ಇಟ್ಟಿದ್ದ ಮೋದಿ ಅವರು, ಕೆಳಗೆ ಬಿದ್ದಿದ್ದ ಹೂವು ಅಥವಾ ದಂಟನ್ನು ಎತ್ತಿಕೊಂಡರು. ನಂತರ ಅದನ್ನೂ ತಮ್ಮ ಭದ್ರತಾ ಸಿಬ್ಬಂದಿಗೆ ನೀಡಿದರು.

ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮೋದಿ ಅವರು ಸಣ್ಣ ವಿಷಯಗಳಿಗೂ ಗಮನ ನೀಡುತ್ತಾರೆ ಎಂದು, ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊಗಳಲಾಗಿದೆ. ಕೆಲವರು, ‘ಇದು ಸ್ವಚ್ಛ ಭಾರತದ ಅಭಿಯಾನದ ಪ್ರತೀಕ’ ಎಂದೂ ಹೊಗಳಿದ್ದಾರೆ.

‘ವಿದೇಶಗಳಲ್ಲಿ ಮೋದಿಯನ್ನು ಗೌರವಿಸಬೇಕು’

‘ಭಾರತದಲ್ಲಿ ನಾವು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಬೇಕು, ಅದು ನಮ್ಮ ಹಕ್ಕು. ಆದರೆ ವಿದೇಶಕ್ಕೆ ಹೋದಾಗ ಅವರು ಭಾರತವನ್ನು ಪ್ರತಿನಿಧಿಸುತ್ತಿರುತ್ತಾರೆ. ಹೀಗಾಗಿ ವಿದೇಶಗಳಲ್ಲಿ ಅವರಿಗೆ ಗೌರವ ಸಿಗಬೇಕು’ ಎಂದು ಕಾಂಗ್ರೆಸ್‌ ನಾಯಕ ಶಶಿ ತರೂರ್ ಹೇಳಿದ್ದಾರೆ.

ಗೇಟ್ಸ್‌ ಸಮ್ಮಾನ

ಬಿಲ್‌ ಮತ್ತು ಮಿಲಿಂಡಾ ಗೇಟ್ಸ್‌ ಪ್ರತಿಷ್ಠಾನವು ಪ್ರಧಾನಿ ನರೇಂದ್ರ ಮೋದಿ ಅವರಿಗೆ, ‘ಗ್ಲೋಬಲ್ ಗೋಲ್‌ಕೀಪರ್‌ ಅವಾರ್ಡ್‌’ ನೀಡಲಿದೆ. ಇದೇ 24–25ರಂದು ನಡೆಯಲಿರುವ ಗೇಟ್ಸ್‌ ಪ್ರತಿಷ್ಠಾನದ ವಾರ್ಷಿಕ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.