ತಿರುಪ್ಪುರ: ಇಂಡಿಯಾ ಬಣ ಸೋಲನ್ನು ಒಪ್ಪಿಕೊಂಡಿದೆ, ಆದರೂ ತಮಿಳುನಾಡನ್ನು ಲೂಟಿ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ರಾಜ್ಯವ್ಯಾಪಿ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮೋದಿ, ‘ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರ ತಮಿಳುನಾಡಿಗೆ ಹಿಂದೆಂದಿಗಿಂತ ಹೆಚ್ಚು ಅನುದಾನ ನೀಡಿದೆ. ಸಬ್ ಕಾ ಸಾಥ್– ಸಬ್ ಕಾ ವಿಕಾಸ್‌ನಡಿ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯತ್ತ ಗಮನಹರಿಸಿದೆ, ‘ಮೋದಿ ಕೆಲಸ ಮಾಡುವಾಗ ಎಲ್ಲರಿಗಾಗಿ ಕೆಲಸ ಮಾಡುತ್ತಾನೆ’ ಎಂದರ್ಥ ಎಂದರು.
ಇಂಡಿಯಾ ಒಕ್ಕೂಟದ ಯಾವ ಒಬ್ಬ ಸದಸ್ಯನೂ ಅಭಿವೃದ್ಧಿ ಅಥವಾ ಶಿಕ್ಷಣ ಕ್ಷೇತ್ರದ ಬಗ್ಗೆ ಮಾತನಾಡಿಲ್ಲ, ಕೇವಲ ಕುಟುಂಬಕ್ಕೆ ತೊಂದರೆಯಾದ ಬಗ್ಗೆ ಹೇಳಿಕೊಂಡರು ಎಂದು ಕುಟುಕಿದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ದಿವಂಗತ ಎಂಜಿಆರ್ ಅವರ ಹೆಸರನ್ನು ಉಲ್ಲೇಖಿಸಿದ ಮೋದಿ, ‘ಎಂಜಿಆರ್ ಎಂದಿಗೂ ರಾಜವಂಶದ ರಾಜಕೀಯವನ್ನು ಮಾಡಲಿಲ್ಲ. ಆದರೆ ಡಿಎಂಕೆಯ ರಾಜವಂಶದ ರಾಜಕೀಯ, ಎಂಜಿಆರ್ ಅವರಿಗೆ ಅವಮಾನ ಮಾಡಿದೆ. ತಮಿಳುನಾಡಿನ ಜನ ಎಂಜಿಆರ್ ಅವರ ಕೊಡುಗೆಯನ್ನು ಇಂದಿಗೂ ಸ್ಮರಿಸುತ್ತಾರೆ. ಎಂಜಿಆರ್ ಅವರನ್ನು ಪ್ರತಿಭೆಯ ಆಧಾರದ ಮೇಲೆ ಜನರನ್ನು ಉತ್ತೇಜಿಸಿದರೇ ಹೊರತು ಅವರ ಕುಟುಂಬದ ಆಧಾರದ ಮೇಲಲ್ಲ. ಎಂಜಿಆರ್ ನಂತರ ರಾಜ್ಯಕ್ಕಾಗಿ ತಮ್ಮನ್ನು ಮುಡಿಪಾಗಿಟ್ಟವರು ಎಂದರೆ ‘ಅಮ್ಮ’ ಜಯಲಲಿತಾ. ಜನರ ಕಲ್ಯಾಣಕ್ಕಾಗಿ ಅವರು ತಮ್ಮ ಇಡೀ ಜೀವನವನ್ನು ಸವೆಸಿದ್ದಾರೆ’ ಎಂದು ಹೇಳಿದರು.
‘ದಶಕಗಳಿಂದ ತಮಿಳುನಾಡನ್ನು ಲೂಟಿ ಮಾಡಿದವರು ಈಗ ಬಿಜೆಪಿ ಬಲಗೊಳ್ಳುತ್ತಿರುವುದನ್ನು ಕಂಡು ಭಯಭೀತರಾಗಿದ್ದಾರೆ. ಅಧಿಕಾರವನ್ನು ಉಳಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ. ಜನರ ನಡುವೆಯೇ ಕಲಹ ತಂದಿಟ್ಟು ಕಿತ್ತಾಡುವಂತೆ ಮಾಡುತ್ತಿದ್ದಾರೆ. ಆದರೆ ತಮಿಳುನಾಡಿನ ಜನ ಅವರ ಸ್ವಚ್ಛ ಮನಸ್ಸಿನಂತೆ ಬುದ್ಧಿವಂತರು, ಅವರಿಗೆ ಸತ್ಯ ಗೊತ್ತಿದೆ’ ಎಂದು ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.