ರಾಂಚಿ: ಜಾರ್ಖಂಡ್ ರಾಜ್ಯದ ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದರು.
ಇಲ್ಲಿನ ಹಳೆಯ ಕೇಂದ್ರ ಕಾರಾಗೃಹದ ಆವರಣದಲ್ಲಿರುವ ಬಿರ್ಸಾ ಮುಂಡಾ ಅವರ 25 ಅಡಿ ಎತ್ತರದ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಬಿರ್ಸಾ ಮುಂಡಾ ಅವರ ನೆನಪಿನಲ್ಲಿ ರೂಪುಗೊಂಡ ಜಾರ್ಖಂಡ್ ರಾಜ್ಯದ ನಿವಾಸಿಗಳಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದರು.
ಜಾರ್ಖಂಡ್ ರಾಜ್ಯ ಐತಿಹಾಸಿಕವಾಗಿ ಮತ್ತು ವಿಶಿಷ್ಟ ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ ಎಂದು ಬಣ್ಣಿಸಿದ ಪ್ರಧಾನಿ, ’ಭಗವಾನ್ ಬಿರ್ಸಾ ಮುಂಡಾ ಅವರು ಜನಿಸಿದ ಈ ನೆಲದಲ್ಲಿ ಅಭಿವೃದ್ಧಿ ಕಾರ್ಯಗಳು ಮುನ್ನಡೆಯಲಿ‘ ಎಂದು ಅವರು ಹಾರೈಸಿದರು.
ಈ ವೇಳೆ ಮುಖ್ಯಮಂತ್ರಿ ಹೇಮಂತ್ ಸೊರೆನ್, ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಮತ್ತು ಕೇಂದ್ರ ಸಚಿವ ಅರ್ಜುನ್ ಮುಂಡಾ ಇದ್ದರು.
ಕೇಂದ್ರ ಸರ್ಕಾರ ಬಿರ್ಸಾ ಮುಂಡಾ ಅವರ ಜನ್ಮ ದಿನವನ್ನು ’ಜನ್‌ಜಾತೀಯ ಗೌರವ ದಿವಸ’ವನ್ನಾಗಿ (ಬುಡಕಟ್ಟು ದಿವಸ) ಆಚರಿಸಲಾಗುತ್ತಿದೆ. ಅವಿಭಜಿತ ಬಿಹಾರದ ಬುಡಕಟ್ಟು ಪ್ರದೇಶದಲ್ಲಿ 1875ರಲ್ಲಿ ಜನಿಸಿದ ಬಿರ್ಸಾ ಮುಂಡಾ, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆ ಮತ್ತು ಮತಾಂತರ ಚಟುವಟಿಕೆಗಳ ವಿರುದ್ಧ ಹೋರಾಟಕ್ಕೆ ಆದಿವಾಸಿಗಳನ್ನು ಒಟ್ಟುಗೂಡಿಸಿದ್ದರು. 1900 ರಲ್ಲಿ ರಾಂಚಿ ಜೈಲಿನಲ್ಲಿ ಅವರು ನಿಧನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.