ನವದೆಹಲಿ: 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೇನೆಯ ವಿಜಯದ ಸ್ಮರಣಾರ್ಥವಾಗಿ ಪ್ರತಿ ವರ್ಷ ಡಿಸೆಂಬರ್ 16 ರಂದು 'ವಿಜಯ ದಿವಸ್' ಅನ್ನು ಆಚರಿಸಲಾಗುತ್ತದೆ. ಈ ದಿನದಂದು ಯುದ್ದದಲ್ಲಿ ಮಡಿದ ಎಲ್ಲಾ ವೀರಯೋಧರಿಗೆ ಭಾರತ ಗೌರವ ಸಲ್ಲಿಸುತ್ತದೆ.
ನಮನ ಸಲ್ಲಿಸಿದ ಪ್ರಧಾನಿ ಮೋದಿ:
1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದ ವೀರ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ 'ವಿಜಯ್ ದಿವಸ್'ನ ಸಂದರ್ಭದಲ್ಲಿ ಗೌರವ ಸಲ್ಲಿಸಿದರು.
‘ವೀರ ಯೋಧರ ಶೌರ್ಯ ಮತ್ತು ಸಮರ್ಪಣೆ ರಾಷ್ಟ್ರಕ್ಕೆ ಅಪಾರ ಹೆಮ್ಮೆ ತಂದಿದೆ. ಅವರ ತ್ಯಾಗ ಮತ್ತು ಅಚಲವಾದ ಮನೋಭಾವ ಜನರ ಹೃದಯ ಮತ್ತು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಅವರ ಧೈರ್ಯ ಮತ್ತು ಅದಮ್ಯ ಮನೋಭಾವವನ್ನು ದೇಶ ಸ್ಮರಿಸುತ್ತದೆ' ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'1971ರ ಯುದ್ಧದ ಸಮಯದಲ್ಲಿ ನಮ್ಮ ಸಶಸ್ತ್ರ ಪಡೆಗಳು ಮಾಡಿದ ನಿಸ್ವಾರ್ಥ ತ್ಯಾಗವನ್ನು ರಾಷ್ಟ್ರ ಕೃತಜ್ಞತೆಯಿಂದ ಸ್ಮರಿಸುತ್ತದೆ. ಅಪ್ರತಿಮ ಧೈರ್ಯವನ್ನು ಪ್ರದರ್ಶಿಸಿದ ಮತ್ತು ಐತಿಹಾಸಿಕ ವಿಜಯವನ್ನು ಸಾಧಿಸಿದ ವೀರಯೋಧರಿಗೆ ವಿಜಯ ದಿವಸ್‌ದಂದು ನಾನು ಗೌರವ ಸಲ್ಲಿಸುತ್ತೇನೆ' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಕ್ಸ್‌ನಲ್ಲಿನ ಪೋಸ್ಟ್ ಮಾಡಿದ್ದಾರೆ.
‘ಡಿಸೆಂಬರ್ 16, 1971ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸಶಸ್ತ್ರ ಪಡೆಗಳ ಐತಿಹಾಸಿಕ ವಿಜಯವನ್ನು ಗುರುತಿಸುತ್ತದೆ. ಈ ದಿನದಂದು ಭಾರತೀಯ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಧೈರ್ಯ ಮತ್ತು ಸ್ಥೈರ್ಯಕ್ಕೆ ವಂದಿಸೋಣ' ಎಂದು ಭಾರತೀಯ ಸೇನೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
'ವಿಜಯ್ ದಿವಸ್ ಸಂದರ್ಭದಲ್ಲಿ ನಮ್ಮ ಸಶಸ್ತ್ರ ಪಡೆಗಳ ಕೆಚ್ಚೆದೆಯ ಹೃದಯಗಳಿಗೆ ನಾನು ನಮಸ್ಕರಿಸುತ್ತೇನೆ. ಈ ದಿನದಂದು ನಮ್ಮ ಸೈನಿಕರು ಪಾಕಿಸ್ತಾನಿ ಪಡೆಗಳ ವಿರುದ್ಧ ಅದ್ಭುತ ವಿಜಯವನ್ನು ಸಾಧಿಸಿದರು. ಇದರ ಪರಿಣಾಮವಾಗಿ ಹೊಸ ರಾಷ್ಟ್ರ ಬಾಂಗ್ಲಾದೇಶ ರೂಪುಗೊಂಡಿತು' ಎಂದು ಅಮಿತ್ ಶಾ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
'1971ರಲ್ಲಿ ಭಾರತೀಯ ಸೈನ್ಯವು ಪಾಕಿಸ್ತಾನವನ್ನು ಸದೆಬಡಿದು ದಿಗ್ವಿಜಯ ಸಾಧಿಸಿದ ಐತಿಹಾಸಿಕ ದಿನವಿದು. ಯುದ್ಧಭೂಮಿಯಲ್ಲಿ ಭಾರತೀಯ ಯೋಧರು ತೋರಿದ ಶೌರ್ಯ, ಪರಾಕ್ರಮವನ್ನು ಈ ದಿನ ಹೆಮ್ಮೆಯಿಂದ ಸ್ಮರಿಸುತ್ತೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
'1971ರಲ್ಲಿ ನಮ್ಮ ಕೆಚ್ಚೆದೆಯ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಿದ್ದರಿಂದ ಪ್ರಪಂಚದ ಭೌಗೋಳಿಕತೆಯು ಇಂದು ಬದಲಾಗಿದೆ. ಶ್ರೀಮತಿ ಇಂದಿರಾ ಗಾಂಧಿ ಅವರ ಕ್ರಿಯಾತ್ಮಕ ಮತ್ತು ನಿರ್ಣಾಯಕ ನಾಯಕತ್ವದಲ್ಲಿ ಇದು ಒಂದು ಮಹತ್ವದ ಸಂದರ್ಭವಾಗಿತ್ತು. ನಮ್ಮ ಸಶಸ್ತ್ರ ಪಡೆಗಳ ಅದಮ್ಯ ಧೈರ್ಯ, ಶೌರ್ಯ ಮತ್ತು ಸಂಕಲ್ಪಕ್ಕೆ ನಾವು ತಲೆಬಾಗುತ್ತೇವೆ' ಎಂದು ಮಲ್ಲಿಕಾರ್ಜುನ ಖರ್ಗೆ ಪೋಸ್ಟ್ ಮಾಡಿದ್ದಾರೆ.
‘1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಪ್ರಾಣದ ಹಂಗು ತೊರೆದು ಪಾಕಿಸ್ತಾನದ ವಿರುದ್ಧ ವೀರಾವೇಶದಿಂದ ಹೋರಾಡಿ ವಿಜಯ ಸಾಧಿಸಿದ ದಿನದಂದು ಹುತಾತ್ಮರಾದ ಪ್ರತಿಯೊಬ್ಬ ವೀರ ಸೈನಿಕನಿಗೂ ಗೌರವ ನಮನಗಳು‘ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಎಕ್ಸ್‌ನಲ್ಲಿ ಹೇಳಿದ್ದಾರೆ.
ಹೊಸ ರಾಷ್ಟ್ರದ ಉದಯಕ್ಕೆ ನಾಂದಿ:
1971ರ ಯುದ್ಧವು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷವಾಗಿತ್ತು. 13 ದಿನಗಳ ಹೋರಾಟದ ನಂತರ ಭಾರತ ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿತು. ಪಾಕಿಸ್ತಾನಿ ಪಡೆಗಳ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ 93 ಸಾವಿರ ಪಾಕಿಸ್ತಾನಿ ಸೈನಿಕರೊಂದಿಗೆ ಭಾರತೀಯ ಸೇನೆ ಮತ್ತು ಬಾಂಗ್ಲಾ ಪಡೆಗಳಿಗೆ ಶರಣಾದರು.
ಶರಣಾಗತಿಯ ಸಂದರ್ಭದಲ್ಲಿ ಲೆಫ್ಟಿನೆಂಟ್ ಜನರಲ್ ಎಎಕೆ ನಿಯಾಜಿ ಪಾಕಿಸ್ತಾನವನ್ನು ಪ್ರತಿನಿಧಿಸಿದರೆ, ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಆರೋರಾ ಭಾರತವನ್ನು ಪ್ರತಿನಿಧಿಸಿದ್ದರು. ಈ ಶರಣಾಗತಿ ಭಾರತಕ್ಕೆ ಐತಿಹಾಸಿಕ ಗೆಲುವು ನೀಡಿ ಹೊಸ ರಾಷ್ಟ್ರದ ಉದಯಕ್ಕೆ ನಾಂದಿ ಹಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.