ನವದೆಹಲಿ: ತುರ್ತು ಪರಿಸ್ಥಿತಿ ವಿರೋಧಿ ಆಂದೋಲನದ ನಾಯಕ ಜಯಪ್ರಕಾಶ ನಾರಾಯಣ ಅವರ ಜನ್ಮದಿನದ (ಬುಧವಾರ) ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.
1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜನಸಮೂಹವನ್ನು ಸಂಘಟಿಸಲು ‘ಸಂಪೂರ್ಣ ಕ್ರಾಂತಿ’ಯ ಅಂದೋಲನವನ್ನು ರೂಪಿಸಿದ್ದ ಜಯಪ್ರಕಾಶ ನಾರಾಯಣರ ಸೇವೆಯನ್ನು ಮೋದಿ ಸ್ಮರಿಸಿದ್ದಾರೆ.
‘ಜಯಪ್ರಕಾಶ ನಾರಾಯಣ ಅವರ ಜನ್ಮ ದಿನದಂದು ಅವರಿಗೆ ನಮನ ಸಲ್ಲಿಸುತ್ತೇನೆ. ಅವರು ತಮ್ಮ ಜೀವನದುದ್ದಕ್ಕೂ ಭಾರತೀಯ ಪ್ರಜಾಪ್ರಭುತ್ವವನ್ನು ಬಲಪಡಿಸಲು ಶ್ರಮಿಸಿದರು. ಅವರ ನಿಸ್ವಾರ್ಥ ಸೇವಾ ಮನೋಭಾವನೆ ದೇಶವಾಸಿಗಳಿಗೆ ಸದಾ ಪ್ರೇರಣೆ ನೀಡುತ್ತದೆ’ ಎಂದು ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
1902ರಲ್ಲಿ ಬಿಹಾರದಲ್ಲಿ ಜನಿಸಿದ್ದ ನಾರಾಯಣ ಅವರು ದೇಶದ ಪ್ರಮುಖ ಸಮಾಜವಾದಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದರು.
ಭಾರತೀಯ ಜನಸಂಘದ ನಾಯಕ ನಾನಾಜಿ ದೇಶಮುಖ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ ಮೋದಿ, ದೇಶಮುಖ್ ಅವರು ಹಳ್ಳಿಗಳು ಮತ್ತು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರ ತ್ಯಾಗ ಮತ್ತು ಸೇವೆ ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಸ್ಮರಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ (ಆರ್‌ಎಸ್‌ಎಸ್) ಗುರುತಿಸಿಕೊಂಡಿದ್ದ ದೇಶಮುಖ್, ಇಂದಿರಾ ಗಾಂಧಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳನ್ನು ಸಂಘಟಿಸುವಲ್ಲಿ ಜಯಪ್ರಕಾಶ ನಾರಾಯಣರ ಅವರೊಂದಿಗೆ ಸಕ್ರಿಯವಾಗಿ ಸಹಕರಿಸಿದ್ದರು. ನಂತರ ಸ್ವಯಂಪ್ರೇರಣೆಯಿಂದ ರಾಜಕೀಯ ತೊರೆದು ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಕ್ಕಾಗಿ ಪ್ರಶಂಸೆಗೆ ಪಾತ್ರರಾಗಿದ್ದರು. ಅವರು 1916ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.