ADVERTISEMENT

ಸ್ವಾಮಿ ವಿವೇಕಾನಂದರ ಜನ್ಮದಿನ: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ನಮನ

ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ‘ರಾಷ್ಟ್ರೀಯ ಯುವ ದಿನ'ವನ್ನಾಗಿ ಆಚರಿಸಲಾಗುತ್ತದೆ.

ಪಿಟಿಐ
Published 12 ಜನವರಿ 2024, 5:19 IST
Last Updated 12 ಜನವರಿ 2024, 5:19 IST
   

ನವದೆಹಲಿ: ಸ್ವಾಮಿ ವಿವೇಕಾನಂದ ಅವರ 161ನೇ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಶುಕ್ರವಾರ ನಮನ ಸಲ್ಲಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ಮೋದಿ, 'ಭಾರತೀಯ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯನ್ನು ಜಾಗತಿಕ ವೇದಿಕೆಯಲ್ಲಿ ಪಸರಿಸಿದ ಸ್ವಾಮಿ ವಿವೇಕಾನಂದ ಅವರಿಗೆ ಜನ್ಮದಿನ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ನಮನಗಳು. ಶಕ್ತಿ ಮತ್ತು ಉತ್ಸಾಹದಿಂದ ತುಂಬಿರುವ ಅವರ ಆಲೋಚನೆಗಳು ಮತ್ತು ಸಂದೇಶಗಳು ಕಾಲಕಾಲಕ್ಕೆ ಏನಾದರೂ ಮಾಡಲು ಯುವಕರನ್ನು ಪ್ರೇರೇಪಿಸುತ್ತಲೇ ಇರುತ್ತವೆ' ಎಂದಿದ್ದಾರೆ.

ಸ್ವಾಮಿ ವಿವೇಕಾನಂದರ ಜನ್ಮದಿನದಂದು ಅವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಮಹಾನ್ ಆಧ್ಯಾತ್ಮಿಕ ನಾಯಕ ಮತ್ತು ಸುಧಾರಕ, ಸ್ವಾಮಿ ವಿವೇಕಾನಂದ ಅವರು ಭಾರತೀಯರಿಗೆ ತಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅರಿವು ಮೂಡಿಸಲು ದೇಶದಾದ್ಯಂತ ಪ್ರಯಾಣಿಸಿದರು. ಯುವಕರನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಲು ಮತ್ತು ಮಾನವೀಯ ಸೇವೆಗೆ ಪ್ರೇರೇಪಿಸಿದರು. ಭಾರತೀಯ ಆಧ್ಯಾತ್ಮಿಕ ಸಂದೇಶವನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹರಡಿದರು. ಅವರ ತತ್ವಗಳು ಮತ್ತು ಆಲೋಚನೆಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಲಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

‘ಅಸ್ಪೃಶ್ಯತೆ,‌ ಅಂಧ ಶ್ರದ್ಧೆ ಮತ್ತು ಪುರೋಹಿತಶಾಹಿ ಡಾಂಭಿಕತನವನ್ನು ತೊಲಗಿಸಿ ಹಿಂದೂ ಧರ್ಮದ ಸುಧಾರಣೆಗೆ ನಿರಂತರ ಪ್ರಯತ್ನ ಮಾಡಿದ ಸ್ವಾಮಿ ವಿವೇಕಾನಂದರನ್ನು ಅವರ ಹುಟ್ಟುಹಬ್ಬದ ದಿನ ಗೌರವದಿಂದ ನೆನೆಯೋಣ. ಬಡತನ ಮತ್ತು ಅನಾರೋಗ್ಯದಿಂದ ಕುಂದದೆ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ಕಿರಿ ವಯಸ್ಸಿನಲ್ಲಿಯೇ ವಿಶ್ವವೇ ತಲೆಬಾಗುವಂತಹ ಆಧ್ಯಾತ್ಮಿಕ ಗುರುವಾಗಿ ಬೆಳೆದು ನಿಂತ ಸ್ವಾಮಿ ವಿವೇಕಾನಂದರ ಬದುಕು ಮತ್ತು ಬರಹ ಯುವ ಸಮುದಾಯಕ್ಕೆ ಸದಾ ಸ್ಪೂರ್ತಿ. ನಾಡಿನ ಸಮಸ್ತ ಯುವಕ-ಯುವತಿಯರಿಗೆ ರಾಷ್ಟ್ರೀಯ ಯುವದಿನದ ಶುಭಾಶಯಗಳು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ರಾಷ್ಟ್ರೀಯ ಯುವ ದಿನ:

ಪ್ರತಿ ವರ್ಷ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ದೇಶಕ್ಕಾಗಿ ಯುವ ಜನತೆ ಹೇಗೆ ಕೆಲಸ ಮಾಡಬೇಕು ಎಂಬುವುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಯುವಕರನ್ನು ಪ್ರೇರೇಪಿಸುವ ಮತ್ತು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಪಸರಿಸುವ ಮೂಲಕ ದೇಶಕ್ಕೆ ಉತ್ತಮ ಭವಿಷ್ಯವನ್ನು ರೂಪಿಸುವುದು ಈ ಆಚರಣೆಯ ಹಿಂದಿನ ಉದ್ದೇಶ.

ಇತಿಹಾಸ

ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 ಅನ್ನು 'ರಾಷ್ಟ್ರೀಯ ಯುವ ದಿನ' ಎಂದು ಆಚರಿಸಲು ಭಾರತ ಸರ್ಕಾರವು 1984ರಲ್ಲಿ ಕರೆ ನೀಡಿತು. ಅಲ್ಲಿಂದ ಇಲ್ಲಿಯವರೆಗೆ ಪ್ರತಿ ವರ್ಷ ರಾಷ್ಟ್ರೀಯ ಯುವ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.