ADVERTISEMENT

ಮಾನಸಿಕವಾಗಿ ಮೋದಿ ಸೋತಿದ್ದಾರೆ, ಶೀಘ್ರ ಸರ್ಕಾರ ಪತನವಾಗಲಿದೆ: ರಾಹುಲ್ ಗಾಂಧಿ

ಪಿಟಿಐ
Published 4 ಸೆಪ್ಟೆಂಬರ್ 2024, 11:20 IST
Last Updated 4 ಸೆಪ್ಟೆಂಬರ್ 2024, 11:20 IST
   

ಜಮ್ಮು: ಲೋಕಸಭಾ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರ ಸರ್ಕಾರ ಉರುಳುವ ಸಮಯ ದೂರವಿಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬನ್ನಿಹಾಳ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಗಾಲ್ದಾನ್‌ನಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಅವರ ಕಾರ್ಪೊರೇಟ್ ಗೆಳೆಯರು ಕೇಂದ್ರ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ನಿರುದ್ಯೋಗ ಹೆಚ್ಚಳ ಕುರಿತಂತೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಇಬ್ಬರು ಬಿಲಿಯನೇರ್‌ಗಳಿಗಾಗಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರವು ಜಿಎಸ್‌ಟಿ ಜಾರಿ ಮತ್ತು ನೋಟು ಅಮಾನ್ಯೀಕರಣ ಮಾಡಿದ್ದರಿಂದ ಸಣ್ಣ ಉದ್ದಿಮೆಗಳಿಗೆ ಮಾರಕವಾಯಿತು ಎಂದು ದೂರಿದ್ದಾರೆ.

ADVERTISEMENT

‘ಮೋದಿಯವರ ಕಾರ್ಪೊರೇಟ್ ಗೆಳೆಯರಾದ ಅಂಬಾನಿ ಮತ್ತು ಅದಾನಿ ಹೆಸರು ಹೇಳಬಾರದು ಎಂದು ನನ್ನನ್ನು ಒತ್ತಾಯಿಸಲಾಗಿದೆ. ಹಾಗಾಗಿ, ಎ1, ಎ2 ಎಂದು ಅವರನ್ನು ಸಂಬೋಧಿಸುತ್ತಿದ್ದೇನೆ. ಈ ಸರ್ಕಾರವು ‘ನಾವಿಬ್ಬರು ನಮ್ಮವರಿಬ್ಬರು’ಎಂಬಂತಾಗಿದೆ. ಈ ನಾಲ್ವರು ಸರ್ಕಾರ ನಡೆಸುತ್ತಿದ್ದಾರೆ’ಎಂದು ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಇಬ್ಬರು ಬಿಲಿಯನೇರ್‌ಗಳ ಅನುಕೂಲಕ್ಕಾಗಿ ರದ್ದು ಮಾಡಿ, ರಾಜ್ಯದ ಸ್ಥಾನಮಾನವನ್ನು ಕಸಿಯಲಾಯಿತು’ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದಲ್ಲೇ ಜಮ್ಮು ಮತ್ತು ಕಾಶ್ಮೀರವು ಅತ್ಯಧಿಕ ನಿರುದ್ಯೋಗ ದರವನ್ನು ಹೊಂದಿದೆ. ಇಲ್ಲಿನ ಯುವಕರಿಗಾಗಿ ಉದ್ಯೋಗ ಸೃಷ್ಟಿಗೆ ಮೋದಿ ಸರ್ಕಾರ ಏನನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ. ವಿರೋಧ ಪಕ್ಷಗಳು ಇಂಡಿಯಾ ಕೂಟ ರಚಿಸಿಕೊಂಡು ಅವರಿಗೆ ಸವಾಲೆಸೆದ ಬಳಿಕ ಅವರ ವಿಶ್ವಾಸ ಕುಸಿತವಾಗಿದೆ ಎಂದಿದ್ದಾರೆ.

‘ಮಾನಸಿಕವಾಗಿ ಮೋದಿಯನ್ನು ನಾವು ಸೋಲಿಸಿದ್ದೇವೆ. ನಾನು ಸಂಸತ್ತಿನಲ್ಲಿ ಅವರ ಮುಂದೆ ಕೂರುತ್ತೇನೆ. ಅವರು ವಿಶ್ವಾಸ ಕಳೆದುಕೊಂಡಿರುವುದು ನನಗೆ ತಿಳಿದಿದೆ.ಈಗ ಸ್ವಲ್ಪ ಸಮಯ ಮಾತ್ರ ಉಳಿದಿದ್ದು, ಅಧಿಕಾರದಿಂದ ಮೋದಿ ಮತ್ತು ಬಿಜೆಪಿಯನ್ನು ಕೆಳಗಿಳಿಸುತ್ತೇವೆ’ಎಂದು ರಾಹುಲ್ ಹೇಳಿದ್ದಾರೆ.

‘ಜಾತಿ ಆಧಾರಿತ ಸಮೀಕ್ಷೆ ಇಲ್ಲ ಎಂದು ಮೊದಲು ಮೋದಿ ಹೇಳಿದ್ದರು. ನಾವು ಜಾತಿ ಆಧಾರಿತ ಸಮೀಕ್ಷೆಗೆ ಒತ್ತಾಯಿಸಿದ್ದೆವು. ಈಗ ನಾವು ಹೇಳಿದ್ದು ಸರಿ ಎಂದು ಆರ್‌ಎಸ್‌ಎಸ್‌ ಹೇಳುತ್ತಿದೆ. ಲ್ಯಾಟರಲ್ ಎಂಟ್ರಿ ವ್ಯವಸ್ಥೆಯನ್ನು ನಾವು ವಿರೋಧಿಸಿದೆವು. ಈ ಕುರಿತಂತೆ ಸರ್ಕಾರದ ಮೇಲೆ ಒತ್ತಡ ಹಾಕಿದೆವು. ಅದರಿಂದ ಮೋದಿ ಭಯಭೀತರಾಗಿದ್ದಾರೆ’ಎಂದು ರಾಹುಲ್ ಕುಟುಕಿದ್ದಾರೆ.

‘ಈ ಹಿಂದಿನ ಚುನಾವಣೆಗಳಲ್ಲಿ ದೊಡ್ಡ ಎದೆ ಮತ್ತು ಉದ್ದುದ್ದ ಭಾಷಣದ ಮೂಲಕ ಮೋದಿ ಜನರ ಗಮನ ಸೆಳೆಯಲು ಯತ್ನಿಸುತ್ತಿದ್ದರು. ಈಗ ಸಂಸತ್ತಿಗೆ ಬರುವಾಗ ಸಂವಿಧಾನ ಪುಸ್ತಕವನ್ನು ತಲೆಮೇಲೆ ಇಟ್ಟುಕೊಂಡು ಬರುವುದನ್ನು ನೀವು ಗಮನಿಸಿರಬಹುದು’ಎಂದಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.