ಕೊಚ್ಚಿ: ಕೇರಳದ ಆಡಳಿತರೂಢ ಸಿಪಿಎಂ, ಹಾಗೂ ವಿರೋಧಪಕ್ಷ ಕಾಂಗ್ರೆಸ್ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಪಕ್ಷಗಳ ಸಂಘರ್ಷದಿಂದಾಗಿ ರಾಜ್ಯದ ಅಭಿವೃದ್ಧಿ ಹಿನ್ನಡೆಯಾಗಿದೆ ಎಂದು ಆರೋಪಿಸಿದರು.
ಕ್ರೈಸ್ತ ಸಮುದಾಯದವರೇ ಅಧಿಕ ಸಂಖ್ಯೆಯಲ್ಲಿರುವ ಈಶಾನ್ಯ ರಾಜ್ಯಗಳು ಮತ್ತು ಗೋವಾದ ಜನರು ಬಿಜೆಪಿ ಆಡಳಿತ ಒಪ್ಪಿಕೊಂಡಿರುವಂತೆಯೇ ‘ಬರುವ ದಿನಗಳಲ್ಲಿ ರಾಜ್ಯದ ಜನರು ಬಿಜೆಪಿಯನ್ನು ಸ್ವೀಕರಿಸಲಿದ್ದಾರೆ’ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
‘ಈಶಾನ್ಯ ರಾಜ್ಯಗಳು, ಗೋವಾ ಯಾವುದೇ ಇರಲಿ, ಸರ್ಕಾರವನ್ನು ನಡೆಸುವ ಬಿಜೆಪಿಯ ಶೈಲಿಯನ್ನು ಗಮನಿಸಿದವರು ಪಕ್ಷದ ಆಡಳಿತವನ್ನು ಒಪ್ಪಿಕೊಳ್ಳುತ್ತಾರೆ. ವಿರೋಧಪಕ್ಷಗಳ ಸುಳ್ಳುಗಳು ಬಹಿರಂಗವಾದಂತೆ ಬಿಜೆಪಿ ಅಸ್ತಿತ್ವ ವಿಸ್ತಾರಗೊಳ್ಳುತ್ತಿದೆ. ಮೇಘಾಲಯ, ನಾಗಾಲ್ಯಾಂಡ್, ಗೋವಾದಲ್ಲಿ ಆಗಿದ್ದು ಅದೆ. ಕೇರಳದಲ್ಲೂ ಬಿಜೆಪಿ ನೇತೃತ್ವದ ಮೈತ್ರಿಕೂಟ ಸರ್ಕಾರ ರಚಿಸಲಿದೆ’ ಎಂದು ಆಶಿಸಿದರು.
ಬಿಜೆಪಿ ಆಯೋಜಿಸಿದ್ದ ’ಯುವಂ 2023‘ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಉಲ್ಲೇಖಿಸಿ, ’ಅಧಿಕಾರದಲ್ಲಿರುವವರು ನಮ್ಮ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ ಎಂಬುದು ಯುವಜನರಿಗೆ ಗೊತ್ತಾಗಿದೆ’ ಎಂದರು.
‘ನಾವು (ಕೇಂದ್ರ ಸರ್ಕಾರ) ಒಂದು ಕಡೆ ದೇಶದಲ್ಲಿ ರಫ್ತು ಚಟುವಟಿಕೆಯನ್ನು ವೃದ್ಧಿಸಲು ಶ್ರಮಿಸುತ್ತಿದ್ದೇವೆ. ಇನ್ನೊಂದು ಕಡೆ ಕೇರಳದಲ್ಲಿ ಕೆಲವರು ಚಿನ್ನ ಕಳ್ಳಸಾಗಣೆ ಮಾಡಲು ಶ್ರಮಿಸುತ್ತಿದ್ದಾರೆ’ ಎಂದು ಪ್ರಧಾನಿ ವ್ಯಂಗ್ಯವಾಗಿ ತರಾಟೆಗೆ ತೆಗೆದುಕೊಂಡರು.
ರಾಜ್ಯ ಸರ್ಕಾರವು ಯುವಜನರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ನಮ್ಮ ಸರ್ಕಾರ ರೋಜಗಾರ್ ಮೇಳ ನಡೆಸುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಹೇಳಿದರು.
ಇತ್ತೀಚೆಗೆ ಬಿಜೆಪಿಗೆ ಸೇರಿದ್ದ ಅನಿಲ್ ಆ್ಯಂಟನಿ, ನಟ ಮತ್ತು ರಾಜ್ಯಸಭೆ ಸದಸ್ಯ ಸುರೇಶ್ ಗೋಪಿ, ನಟರಾದ ಉನ್ನಿ ಮುಕುಂದನ್, ಅಪರ್ಣಾ ಬಾಲಮುರಳಿ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವು ಪ್ರಮುಖರು ಹಾಜರಿದ್ದರು.
‘ಪ್ರಧಾನಿಗೆ ಅದ್ಧೂರಿ ಸ್ವಾಗತ’
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿಗೆ ಭೇಟಿ ನೀಡಿದಾಗ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ನಾಗರಿಕರು ಅದ್ಧೂರಿ ಸ್ವಾಗತ ನೀಡಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪುಷ್ಪವೃಷ್ಟಿ ಮೂಲಕ ಪ್ರಧಾನಿಗೆ ಸ್ವಾಗತ ಕೋರಿದರು.
ಸುಮಾರು 2 ಕಿ.ಮೀ ದೂರ ರೋಡ್ ಶೋ ನಡೆಯಿತು. ಕೇರಳದ ಸಾಂಪ್ರದಾಯಿಕ ಉಡುಗೆ ಕುರ್ತಾ, ಶಾಲು, ಪಂಚೆಯಲ್ಲಿ ಗಮನಸೆಳೆದ ಪ್ರಧಾನಿ ವಾಹನದಲ್ಲಿ ನಿಂತು ಜನರತ್ತ ಕೈಬೀಸಿದರು.
ರಸ್ತೆಯ ಇಕ್ಕೆಲಗಳ ಜೊತೆಗೇ ಆಸುಪಾಸಿನಲ್ಲಿದ್ದ ಎತ್ತರದ ಕಟ್ಟಡಗಳ ಮೇಲೂ ಜನರು ನಿಂತಿದ್ದರು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದು, ಸುಮಾರು ಒಂದು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಬಿಜೆಪಿ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದಿದ್ದು, ಪಕ್ಷದ ಚಿಹ್ನೆಯಿದ್ದ ಟೋಪಿ ಧರಿಸಿದ್ದರು. ಮೋದಿ ಚಿತ್ರವಿದ್ದ ಭಿತ್ತಿಪತ್ರಗಳನ್ನು ಹಿಡಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.